ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗ್ಪುರ ಬಾಬಾ ಸಾಹೇಬರ ದೀಕ್ಷಾ ಭೂಮಿಯೇ ಹೊರತು RSSನ ಸಂಘ ಭೂಮಿಯಲ್ಲ; ಕನ್ಹಯ್ಯ

Published 28 ಡಿಸೆಂಬರ್ 2023, 14:49 IST
Last Updated 28 ಡಿಸೆಂಬರ್ 2023, 14:49 IST
ಅಕ್ಷರ ಗಾತ್ರ

ನಾಗ್ಪುರ: ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ನಾಗ್ಪುರ, ದೀಕ್ಷಾ ಭೂಮಿಯೇ ಹೊರತು ಆರ್‌ಎಸ್‌ಎಸ್‌ನ ಸಂಘ ಭೂಮಿಯಲ್ಲ’ ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಹೇಳಿದರು.

ಕಾಂಗ್ರೆಸ್‌ನ 139ನೇ ಸಂಸ್ಥಾಪನಾ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ’ಹಮ್ ತಯ್ಯಾರ್‌ ಹೇ’ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ 1920ರಲ್ಲಿ ಹೋರಾಟ ಆರಂಭಿಸಿದ್ದು ಈ ನೆಲದಿಂದಲೇ, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ನಂತರ ಚುನಾವಣಾ ಪ್ರಚಾರ ಆರಂಭಿಸಿದ್ದೂ ಇದೇ ನಾಗ್ಪುರದಿಂದ. ಆಗ ವಿದರ್ಭ ಪ್ರಾಂತ್ಯದಲ್ಲಿ ಕಾಂಗ್ರೆಸ್‌ 11 ಕ್ಷೇತ್ರಗಳನ್ನು ಗೆದ್ದಿತ್ತು’ ಎಂದರು.

‘ಜೇಬುಗಳ್ಳ ಕಳ್ಳತನ ಮಾಡಿದ ನಂತರ ತಾನೇ ಮೊದಲು ‘ಕಳ್ಳ... ಕಳ್ಳ...’ ಎಂದು ಕೂಗಿ ಜನರ ದಿಕ್ಕು ತಪ್ಪಿಸಿ ತನ್ನನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಾನೆ. ಬಿಜೆಪಿ ಕೂಡಾ ಇದೇ ತಂತ್ರವನ್ನು ಬಳಸಿದೆ. ಜನರ ಕಣ್ಣಿನಲ್ಲಿ ಕಾಂಗ್ರೆಸ್‌ ಹೆಸರು ಕೆಡಿಸುವ ಪ್ರಯತ್ನ ನಡೆಸಿದೆ’ ಎಂದು ಆರೋಪಿಸಿದರು.

‘₹2 ಸಾವಿರ ಮುಖಬೆಲೆಯ ನೋಟನ್ನು ನಾಲ್ಕು ವರ್ಷಗಳ ಕಾಲ ಇಟ್ಟುಕೊಳ್ಳಲು ಆಗದವರು, 70 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಪ್ರಶ್ನಿಸುತ್ತಿದ್ದಾರೆ‘ ಎಂದರು.
ಇಮ್ರಾನ್‌ ಪ್ರತಾಪ್‌ಗರಿ, ರಾಜ್ಯಸಭಾ ಸದಸ್ಯ

ಕಾಂಗ್ರೆಸ್ ಅಧಿಕಾರಕ್ಕೆ ತರಲು 100 ದಿನಗಳ ಶ್ರಮ ಅಗತ್ಯ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿ, ‘ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಪ್ರತಿಯೊಬ್ಬರೂ ಮುಂದಿನ 100 ದಿನಗಳ ಕಾಲ ಅವಿರತವಾಗಿ ದುಡಿಯುವುದು ಅಗತ್ಯ’ ಎಂದರು.

‘ಈ ದೇಶಕ್ಕಾಗಿ ಮತ್ತು ಕಾಂಗ್ರೆಸ್ ಪಕ್ಷಕ್ಕಾಗಿ ಮುಂದಿನ 100 ದಿನಗಳು ಅತ್ಯಂತ ಪ್ರಮುಖವಾದದ್ದು. 2024ರ ಮೊದಲಾರ್ಧದಲ್ಲೇ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಪಕ್ಷಕ್ಕಾಗಿ ದುಡಿಯಲು ಹೊರಡುತ್ತಿರುವುದಾಗಿ ಈಗಲೇ ನಿಮ್ಮ ಕುಟುಂಬ ಸದಸ್ಯರಿಗೆ ತಿಳಿಸಿ’ ಎಂದರು.

‘ರಾಹುಲ್ ಗಾಂಧಿ ಅವರ ‘ಭಾರತ್ ಜೋಡೊ ಯಾತ್ರಾ’ ಸಾಗಿದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಣಿಪುರದಿಂದ ಮುಂಬೈವರೆಗೂ ನಡೆಯಲಿರುವ ‘ಭಾರತ್ ನ್ಯಾಯಾ ಯಾತ್ರಾ’ ನಂತರ ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಬಹುಮತ ಸಾಧಿಸಿ ಸರ್ಕಾರ ರಚಿಸಲಿದೆ’ ಎಂದು ರೇವಂತ್ ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರತಿಯೊಂದು ಔಷಧಿಗೂ ಒಂದು ಎಕ್ಸ್‌ಪೈರಿ ದಿನಾಂಕವಿರುತ್ತದೆ. ನರೇಂದ್ರ ಮೋದಿ ಅವರ ಔಷಧ ಈ ದೇಶದಲ್ಲಿ ಇನ್ನು ಮುಂದೆ ಕೆಲಸ ಮಾಡದು. ತಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುವ ಬಿಜೆಪಿಯ ಆ ಶಕ್ತಿಗಳೇ ಅದಾನಿ–ಪ್ರಧಾನಿ’ ಎಂದರು.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಮಾತನಾಡಿ, ‘ಈ ದೇಶಕ್ಕಾಗಿ ದುಡಿದ ಅತ್ಯಂತ ಹಳೆಯ ಪಕ್ಷಕ್ಕೆ ಸೇರಿದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ತಮ್ಮ ಜೀವವನ್ನೇ ಮುಡಿಪಾಗಿಟ್ಟ ಮಹನೀಯರು. ಕಾಂಗ್ರೆಸ್‌ನ ನೀತಿ ಮತ್ತು ತತ್ವವೇ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾದ ಬಳಿಕ ಭಾರತವು ಸೂಜಿಯಿಂದ ಹಿಡಿದು ವಿಮಾನ ತಯಾರಿಕೆವರೆಗೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ದೇಶವನ್ನು ಬೆಳೆಸಿತು. ಆದರೆ ಇಂದು ಬಿಜೆಪಿ ಅವರ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT