ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲಲ್ಲಾ ಮೂರ್ತಿ: ಅಂತಿಮ ಆಯ್ಕೆ ಆಗಿಲ್ಲ –ಟ್ರಸ್ಟ್ ಸ್ಪಷ್ಟನೆ

Published 2 ಜನವರಿ 2024, 16:09 IST
Last Updated 2 ಜನವರಿ 2024, 16:09 IST
ಅಕ್ಷರ ಗಾತ್ರ

ಅಯೋಧ್ಯೆ: ‘ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಬೇಕಿರುವ ರಾಮಲಲ್ಲಾ ಮೂರ್ತಿ ಆಯ್ಕೆ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ರಾಮಮಂದಿರ ಟ್ರಸ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.

‘ಪ್ರತಿಷ್ಠಾಪನೆಗೆ ಮೂರು ಮೂರ್ತಿಗಳು ಸಿದ್ಧವಾಗಿವೆ. ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮತ್ತು ಇತರೆ ಸ್ವಾಮೀಜಿಗಳ ಜತೆಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಟ್ರಸ್ಟ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

‘ಟ್ರಸ್ಟ್ ಈ ಸಂಬಂಧ ತೆಗೆದುಕೊಳ್ಳುವ ತೀರ್ಮಾನವನ್ನು ಸೂಕ್ತ ಕಾಲದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು’ ಎಂದು ಟ್ರಸ್ಟ್‌ನ ಕಚೇರಿ ಉಸ್ತುವಾರಿಯಾಗಿರುವ ಪ್ರಕಾಶ್‌ ಗುಪ್ತಾ ಅವರು ತಿಳಿಸಿದ್ದಾರೆ.

ಅಂತಿಮವಾಗಿ ಆಯ್ಕೆಯಾಗುವ ಮೂರ್ತಿಯನ್ನು ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು, ಶಿಲ್ಪಿಗಳಾದ ಕರ್ನಾಟಕದ ಅರುಣ್ ಯೋಗಿರಾಜ್‌, ಗಣೇಶ್‌ ಭಟ್ ಮತ್ತು ಜೈಪುರದ ಸತ್ಯನಾರಾಯಣ ಪಾಂಡೆ ಅವರು ಮೂರ್ತಿ ಕೆತ್ತನೆ ಮಾಡಿದ್ದಾರೆ. ಕರ್ನಾಟಕ ಇಬ್ಬರು ಶಿಲ್ಪಿಗಳು ರಾಜ್ಯದ್ದೇ ಕಲ್ಲು ಬಳಕೆ ಮಾಡಿದ್ದಾರೆ. ಪಾಂಡೆ ಅವರು ರಾಜಸ್ಥಾನದಿಂದ ತರಿಸಲಾಗಿದ್ದ ಕಲ್ಲು ಬಳಕೆ ಮಾಡಿದ್ದಾರೆ. 

ಅಂತಿಮವಾಗಿ ಪ್ರತಿಷ್ಠಾಪಿಸಬೇಕಾದ ಮೂರ್ತಿಯನ್ನು ಆಯ್ಕೆ ಮಾಡುವ ಮುನ್ನ, ಮೂರ್ತಿಯ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿಯನ್ನು ಪಡೆಯಲಾಗುವುದು ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

ಅಂತಿಮ ಪ್ರತಿಷ್ಠಾಪನೆಗಾಗಿ ಮೈಸೂರಿನ ಅರುಣ್‌ ಯೋಗಿರಾಜ್‌ ಅವರು ರೂಪಿಸಿದ್ದ ಮೂರ್ತಿ ಆಯ್ಕೆಯಾಗಿದೆ ಎಂದು ಬಿಜೆಪಿಯ ಹಲವು ಮುಖಂಡರು ಸೋಮವಾರ ಜಾಲತಾಣಗಳಲ್ಲಿ ಅಭಿನಂದನಾ ಸಂದೇಶ ಪೋಸ್ಟ್‌ ಮಾಡಿದ್ದರು. 

ಆದರೆ, ಸ್ವತಃ ಅರುಣ್‌ ಯೋಗಿರಾಜ್ ಅವರು, ‘ಮೂರ್ತಿ ಆಯ್ಕೆಗೆ ಕುರಿತಾಗಿ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಮೂವರು ಶಿಲ್ಪಿಗಳಲ್ಲಿ ನಾನೂ ಒಬ್ಬ ಎಂಬುದು ನನಗೆ ಖುಷಿ ನೀಡಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT