ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಯೇ ಪುಕ್ಕಟೆ ನೆಲೆಸಿರುವವರು: ಶಾಂತಶ್ರೀ ಹೇಳಿಕೆಗೆ JNUSU ತಿರುಗೇಟು

Published 23 ಏಪ್ರಿಲ್ 2024, 16:31 IST
Last Updated 23 ಏಪ್ರಿಲ್ 2024, 16:31 IST
ಅಕ್ಷರ ಗಾತ್ರ

ನವದೆಹಲಿ: ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕುರಿತು ಹೇಳಿಕೆ ನೀಡಿದ್ದ ಕುಲಪತಿ ಶಾಂತಶ್ರೀ ಧುಲೀಪುಡೀ ಪಂಡಿತ್‌ ಅವರ ವಿರುದ್ಧ ಜೆಎನ್‌ಯುಎಸ್‌ಯು (ಜವಹರಲಾಲ್‌ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ) ತಿರುಗೇಟು ನೀಡಿದೆ.

ಈ ಕುರಿತು ಸೋಮವಾರ ರಾತ್ರಿ ಶಾಂತಶ್ರೀ ಅವರಿಗೆ ಪತ್ರ ಬರೆದಿರುವ ಜೆಎನ್‌ಯುಎಸ್‌ಯು, ‘ವಿಶ್ವವಿದ್ಯಾಲಯವನ್ನು ಗುರಿಯಾಗಿಸಿ ತಯಾರಿಸಲಾದ ಚಲನಚಿತ್ರಗಳನ್ನು ಕುಲಪತಿಯವರು ಸಮರ್ಥವಾಗಿ ಎದುರಿಸಿಲ್ಲ. ಕ್ಯಾಂಪಸ್‌ನಲ್ಲಿರುವ ರಾಜಕೀಯ ಪಕ್ಷಗಳ ಬೆಂಬಲಿತ ಗುಂಪುಗಳು ಐಷಾರಾಮದಿಂದ ಇರುವುದರ ಕುರಿತು ಅವರು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ತಾಳಿದ್ದಾರೆ. ಆದ್ದರಿಂದ ಕುಲಪತಿ ಅವರೇ ವಿ.ವಿಯಲ್ಲಿ ಪುಕ್ಕಟೆ ನೆಲಸಿರುವವರು’ ಎಂದು ತಿಳಿಸಿದೆ.

‘ಇಲ್ಲಿ ಪುಕ್ಕಟೆ ನೆಲೆಸಿರುವವರು ಯಾರು? ಶೈಕ್ಷಣಿಕ ಉತ್ಕೃಷ್ಟತೆಗಾಗಿ ಶ್ರಮಿಸುತ್ತಿರುವ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳೋ ಅಥವಾ ಕುಲಪತಿ ಕಚೇರಿಯಲ್ಲಿ ಕುಳಿತು, ತೆರಿಗೆದಾರ ಹಣದಿಂದ ಸಂಬಳ ಪಡೆದು, ಜವಾಬ್ದಾರಿಗಳನ್ನು ನೆರವೇರಿಸುವುದರಲ್ಲಿ ವಿಫಲರಾದ ನೀವೋ? ಎಂದು ಕೇಳಿದೆ.

‘ಮೊದಲು ನೀವು ಆತ್ಮಾವಲೋಕನ ಮಾಡಿಕೊಂಡು, ವಿದ್ಯಾರ್ಥಿಗಳನ್ನು ‘ಪುಕ್ಕಟೆ ನೆಲೆಸಿರುವವರು’ ಎಂಬ ಹೇಳಿಕೆಯನ್ನು ಪುನರ್‌ ಪರಿಶೀಲಿಸಬೇಕು’ ಎಂದು ಶಾಂತಶ್ರೀ ಅವರಿಗೆ ಒತ್ತಾಯಿಸಲಾಗಿದೆ.

ಆರ್‌ಎಸ್‌ಎಸ್‌ ಬೆಂಬಲಿತ ಕಾರ್ಯಕ್ರಮಗಳನ್ನು ಕ್ಯಾಂಪಸ್‌ನಲ್ಲಿ ನಡೆಸುವುದಕ್ಕೆ ಅನುಮತಿಸುತ್ತಿರುವುದಕ್ಕೆ ಕುಲಪತಿ ವಿರುದ್ಧ ಹರಿಹಾಯ್ದಿರುವ ಜೆಎನ್‌ಯುಎಸ್‌ಯು, ‘ಆರ್‌ಎಸ್‌ಎಸ್‌ ನಡೆಸುವ ಕಾರ್ಯಕ್ರಮಗಳಿಗೆ ಕ್ಯಾಂಪಸ್‌ನ ಸೌಲಭ್ಯಗಳನ್ನು ಬಳಸಲು ಅನಿರ್ಬಂಧಿತ ಅವಕಾಶ ನೀಡಲಾಗುತ್ತದೆ. ಕಾರ್ಯಕ್ರಮಗಳಿಗಾಗಿ ತರಗತಿ ಕೊಠಡಿಗಳು, ಸಭಾಂಗಣ ಮುಂತಾದವುಗಳನ್ನು ಬಳಸಿಕೊಳ್ಳಲಾಗುತ್ತದೆ. ಅದಕ್ಕೆ ಅವರು ಹಣವನ್ನು ನೀಡುವುದಿಲ್ಲ. ಆದರೆ, ಮೂಲಸೌಕರ್ಯಗಳನ್ನ ಬಳಸಲು ಅವಕಾಶ ಕೋರಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ನೋಟಿಸ್‌ ಜಾರಿ ಮಾಡಲಾಗುತ್ತದೆ. ಇಂಥ ದ್ವಂದ್ವ ನಿಲುವು ನಮಗೆ ಕೋಪ ತರಿಸುತ್ತದೆ’ ಎಂದೂ ಅದು ಹೇಳಿದೆ.

‘ಭಾರತ ಒಂದು ಸಮುದಾಯಕ್ಕೆ ಸೀಮಿತವಲ್ಲ’

‘ಧರ್ಮ ಭಾಷೆ ಮತ್ತು ವಸ್ತ್ರ ಸಂಹಿತೆಯಲ್ಲಿ ಏಕರೂಪತೆ ಭಾರತದಲ್ಲಿ ಪ್ರತಿಫಲ ನೀಡುವುದಿಲ್ಲ. ಏಕೆಂದರೆ ಈ ದೇಶ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ’ ಎಂದು ಜವಹರಲಾಲ್‌ ನೆಹರು ವಿಶ್ವವಿದ್ಯಾಲಯ ಕುಲಪತಿ ಶಾಂತಶ್ರೀ ಡಿ. ಪಂಡಿತ್‌ ಅವರು ಹೇಳಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು ‘ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಗಳನ್ನು ಶೈಕ್ಷಣಿಕ ಸಂಸ್ಥೆಗಳು ಗೌರವಿಸಬೇಕು. ಯಾರೆಲ್ಲ ಹಿಜಬ್‌ ಧರಿಸಬೇಕೆಂದು ಬಯಸುತ್ತಾರೋ ಅವರಿಗೆ ಅವಕಾಶ ನೀಡಬೇಕು’ ಎಂದಿದ್ದಾರೆ. 2022ರಲ್ಲಿ ಕರ್ನಾಟಕದಲ್ಲಿ ಹಿಜಬ್‌ ವಿವಾದ ಭುಗಿಲೆದ್ದಿದ್ದನ್ನೂ ಅವರು ನೆನಪಿಸಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT