ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಅಸ್ಸಾಂ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಅಂಗ್‌ಕಿತಾ ದತ್ತಾ ಅಸಮಾಧಾನ
Last Updated 19 ಏಪ್ರಿಲ್ 2023, 14:46 IST
ಅಕ್ಷರ ಗಾತ್ರ
ಗುವಾಹಟಿ: ಭಾರತೀಯ ಯುವ ಕಾಂಗ್ರೆಸ್‌ನ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ, ಶಿವಮೊಗ್ಗದವರಾದ ಶ್ರೀನಿವಾಸ್‌ ಬಿ.ವಿ. ಅವರ ವಿರುದ್ಧ ಅಸ್ಸಾಂ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಅಂಗ್‌ಕಿತಾ ದತ್ತಾ ಅವರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಜೊತೆಗೆ ತಮ್ಮ ವಿರುದ್ಧ ಲಿಂಗಾಧಾರಿತ ತಾರತಮ್ಯವನ್ನೂ ಶ್ರೀನಿವಾಸ್‌ ಮಾಡಿದ್ದಾರೆ ಎಂದಿದ್ದಾರೆ.
ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಕಳೆದ 6 ತಿಂಗಳಿನಿಂದ ಶ್ರೀನಿವಾಸ್‌ ತಮಗೆ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಮತ್ತು ಭಾರತ್‌ ಜೋಡೊ ಯಾತ್ರೆ ವೇಳೆ ಈ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ದೂರು ನೀಡಿದ್ದಾಗಿ ಹೇಳಿದ್ದಾರೆ. ರಾಹುಲ್‌ ಗಾಂಧಿ ಸೇರಿ ಹೈಕಮಾಂಡ್‌ನ ಯಾರೊಬ್ಬರೂ ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.
‘ಸ್ರ್ತೀವಿರೋಧಿ ಮತ್ತು ಪುರುಷ ಅಹಂಕಾರ ಹೊಂದಿರುವ ಐವೈಸಿಯ ನಾಯಕನೊಬ್ಬ ಪ್ರತಿಬಾರಿ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಲು ಮತ್ತು ಅವಮಾನಿಸಲು ಹೇಗೆ ಸಾಧ್ಯ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿ ವಾಹಿನಿಗಳ ಎದುರು ಮಾತನಾಡಿದ ಅವರು, ಅಸ್ಸಾಂ ಯುವ ಕಾಂಗ್ರೆಸ್‌ನ (ಎವೈಸಿ) ಚುನಾವಣೆಯನ್ನು ಶ್ರೀನಿವಾಸ್‌ ಅವರು ಏಕಾಏಕಿಯಾಗಿ ನಿಗದಿಪಡಿಸಿದರು. ಎವೈಸಿಯ ಚಟುವಟಿಕೆಗಳ ವಿಚಾರವಾಗಿ ನನಗೆ ಮಹತ್ವ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ನಾನೊಬ್ಬ ಮಹಿಳಾ ನಾಯಕಿ. ನಾನೇ ಕಿರುಕುಳಕ್ಕೊಳಗಾದರೆ, ಪಕ್ಷಕ್ಕೆ ಮಹಿಳೆಯರು ಸೇರ್ಪಡೆ ಆಗುವುದನ್ನು ನಾನು ಹೇಗೆ ಪ್ರೋತ್ಸಾಹಿಸಲಿ’ ಎಂದು ಪ್ರಶ್ನಿಸಿದ್ದಾರೆ.
ಅಂಗ್‌ಕಿತಾ ಅವರು ಅಸ್ಸಾಂ ಮಾಜಿ ಸಚಿವ, ಅಸ್ಸಾಂ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಅಧ್ಯಕ್ಷ ಅಂಜನ್‌ ದತ್ತಾ ಅವರ ಮಗಳು. 2016ರಲ್ಲಿ ಅಂಜನ್‌ ಅವರು ನಿಧನರಾದ ಬಳಿಕ ಅಂಗ್‌ಕಿತಾ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯರಾದರು. 2018ರ ಜೂನ್‌ನಲ್ಲಿ ಎವೈಸಿಯ ಉಪಾಧ್ಯಕ್ಷರಾಗಿ ಆಯ್ಕೆ ಆದರು. 2021ರಲ್ಲಿ ಎವೈಸಿಯ ಅಧ್ಯಕ್ಷರಾಗಿ ಮರು ಆಯ್ಕೆ ಆದರು.

ಅಂಗ್‌ಕಿತಾಗೆ ನ್ಯಾಯಾಂಗ ನೋಟಿಸ್‌: ಅಂಗ್‌ಕಿತಾ ಅವರ ಆರೋಪವನ್ನು ಐವೈಸಿ ತಳ್ಳಿಹಾಕಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀನಿವಾಸ್‌ ಅವರಿಗೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಅವರಿಗೆ ನ್ಯಾಯಾಂಗ ನೋಟಿಸ್‌ ನೀಡಿದೆ. ಕ್ಷಮೆ ಯಾಚಿಸದಿದ್ದರೆ ಶ್ರೀನಿವಾಸ್‌ ಪರವಾಗಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಹೇಳಿದೆ.

ಅಂಗ್‌ಕಿತಾ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ. ಬದಲಾಗಿ ಶ್ರೀನಿವಾಸ್‌ ಅವರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಶ್ರೀನಿವಾಸ್ ಅವರು ಖ್ಯಾತಿ ಹೊಂದಿರುವ ಸಾರ್ವಜನಿಕ ವ್ಯಕ್ತಿತ್ವ, ಸಾಮಾಜಿಕ ಕಾರ್ಯಕರ್ತ ಮತ್ತು ರಾಜಕಾರಣಿ. ಕೋವಿಡ್‌ ಲಾಕ್‌ಡೌನ್‌ ವೇಳೆ ಅವರು ಸಲ್ಲಿಸಿರುವ ಸಾರ್ವಜನಿಕ ಸೇವೆಯು ಅನನ್ಯ. ಅವರ ವಿರುದ್ಧ ಆರೋಪ ಮಾಡಲು ಅಂಗ್‌ಕಿತಾ ಅವರು ಬಳಸಿರುವ ಭಾಷೆಯು ಅಸಂಸದೀಯ, ಅಸಭ್ಯ, ಅಪಮಾನಕಾರಿ ಮತ್ತು ದುರುದ್ದೇಶಪೂರ್ವಕವಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ಅಂಗ್‌ಕಿತಾ ಅವರ ಹೆಸರು ಕೇಳಿಬಂದಿದೆ. ಹೀಗಾಗಿ ಕಾಂಗ್ರೆಸ್‌ ಹೆಸರು ಹಾಳುಮಾಡಿ ಬಿಜೆಪಿಗೆ ಸೇರ್ಪಡೆ ಆಗಲು ಅವರು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೂಡಾ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT