ನವದೆಹಲಿ(ಪಿಟಿಐ): ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕದ ಪ್ರವಾಸಿಗರಿಗೆ ಆಗಮನ ವೀಸಾ ನೀಡುವ ಯೋಜನೆಯನ್ನು ಭಾರತ ಸರ್ಕಾರ ಹಾಕಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26ರಂದು ಅಮೆರಿಕಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಈ ಯೋಜನೆ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ಅವರ ಅಮೆರಿಕ ಭೇಟಿಗೂ ಮುನ್ನ ಆಗಮನ ವೀಸಾ ನೀಡುವ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಗೃಹ ಇಲಾಖೆಯು ಅಧಿಕ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತದಲ್ಲಿ ಮನೆ ಅಥವ ಕೆಲಸ ಹೊಂದಿಲ್ಲದ ಪ್ರವಾಸಿಗರಿಗಾಗಿ ಈ ವಿಶೇಷ ವೀಸಾ ರೂಪಿಸಲಾಗುತ್ತಿದೆ. ಭಾರತದಲ್ಲಿ ವಿಹಾರ, ಪ್ರವಾಸಿ ತಾಣ ಭೇಟಿ, ಗೆಳೆಯರು–ಬಂಧುಗಳ ಭೇಟಿ ಮುಂತಾದ ಕಾರ್ಯಗಳಿಗಾಗಿ ಬರುವ ಅಮೆರಿಕದ ಪ್ರಜೆಗಳಿಗೆ ಈ ಸೌಲಭ್ಯ ದೊರೆಯಲಿದೆ.
ಕೇಂದ್ರ ಗೃಹ ಸಚಿವಾಲಯವು ಪ್ರವಾಸೋದ್ಯಮ ಸಚಿವಾಯದ ಜತೆ ಮಾತುಕತೆ ನಡೆಸಿ ಪ್ರವಾಸಕ್ಕೆ ಆಗಮಿಸುವ ಅಮೆರಿಕದ ನಾಗರಿಕರಿಗೆ ಆಗಮನ ವೀಸಾ ನಿಡುವ ಬಗ್ಗೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.
ಈ ನೂತನ ಯೋಜನೆಯ ಪ್ರಕಾರ ಪ್ರವಾಸಿಗರು 30 ದಿನಗಳ ಕಾಲ ಭಾರತದಲ್ಲಿ ಉಳಿದುಕೊಳ್ಳಬಹುದಾಗಿದೆ.