ಜಾಮ್ನಗರ: ನಾಲ್ಕು ವರ್ಷದ ಬಾಲಕನೊಬ್ಬ ತೋಟದಲ್ಲಿದ್ದ 350 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ, ಗುಜರಾತ್ನ ಜಾಮ್ನಗರ ಜಿಲ್ಲೆಯ ಗೋಕುಲ್ಪುರ ಪರಾ ಎಂಬ ಗ್ರಾಮದಲ್ಲಿ ಶನಿವಾರ ನಡೆದಿದೆ.ಮೃತ ಬಾಲಕನನ್ನು ವಿಜಯ್ ವಾಸವ ಎಂದು ಗುರುತಿಸಲಾಗಿದೆ.
‘ಬೆಳಿಗ್ಗೆ ತೋಟದ ಬಳಿ ವಿಜಯ್ ಆಟವಾಡುವಾಗ ಜಾರಿ ಕೊಳವೆ ಬಾವಿಗೆ ಬಿದ್ದಿದ್ದು, ಸುಮಾರು 80 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಕೊಳವೆ ಬಾವಿಯಲ್ಲಿ ನೀರು ಇದ್ದ ಕಾರಣ, ಬಾಲಕ ಮುಳಗಿ ಮೃತಪಟ್ಟಿರಬಹುದು’ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಎ.ಕೆ. ಅದಿಯಾ ತಿಳಿಸಿದ್ದಾರೆ.‘ಬಾಲಕನ ತಂದೆ– ತಾಯಿ ಕೂಲಿ ಕಾರ್ಮಿಕರಾಗಿದ್ದು, ಘಟನೆ ವೇಳೆ ಇಬ್ಬರೂ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಹೇಳಿದರು.
‘ಬಾಲಕನ ರಕ್ಷಣೆಗಾಗಿ ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಶ್ರಮಪಟ್ಟರೂ, ಆತನನ್ನು ಬದುಕಿಸಲಾಗಲಿಲ್ಲ. ಅಲ್ಲದೆ, ಬಾಲಕನ ಮೃತದೇಹ ಹೊರ ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅದಿಯಾ ತಿಳಿಸಿದರು.