ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಧ್ರಾ ರೈಲು ಹತ್ಯಾಕಾಂಡ: 11 ಅಪರಾಧಿಗಳ ಗಲ್ಲು ಶಿಕ್ಷೆ ಜೀವಾವಧಿಗೆ ಇಳಿಕೆ

Last Updated 9 ಅಕ್ಟೋಬರ್ 2017, 18:49 IST
ಅಕ್ಷರ ಗಾತ್ರ

ಅಹಮದಾಬಾದ್‌ : ಗುಜರಾತ್‌ನ ಗೋದ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ 11 ಅಪರಾಧಿಗಳ ಗಲ್ಲು  ಶಿಕ್ಷೆಯನ್ನು ಕಠಿಣ ಜೀವಾವಧಿಗೆ ಇಳಿಸಿ ಗುಜರಾತ್‌ ಹೈಕೋರ್ಟ್‌ ಆದೇಶ ನೀಡಿದೆ. 20 ತಪ್ಪಿತಸ್ಥರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಮತ್ತು ರೈಲ್ವೆ ವಿಫಲವಾಗಿವೆ. ಹಾಗಾಗಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಮತ್ತು ರೈಲ್ವೆ ಸೇರಿ ತಲಾ ₹10 ಲಕ್ಷ ಪರಿಹಾರ ನೀಡಬೇಕು. ಗಾಯಗೊಂಡವರ ಅಂಗವೈಕಲ್ಯದ ಪ್ರಮಾಣದ ಆಧಾರದಲ್ಲಿ ಪರಿಹಾರ ಕೊಡಬೇಕು ಎಂದು ಹೈಕೋರ್ಟ್‌ ಹೇಳಿದೆ.

ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್‌–6 ಬೋಗಿಗೆ 2002ರ ಫೆಬ್ರುವರಿ 27ರಂದು ಗೋದ್ರಾ ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಉತ್ತರ ಪ್ರದೇಶದ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 59 ಕರಸೇವಕರು ಈ ಬೆಂಕಿಯಲ್ಲಿ ಸುಟ್ಟು ಹೋಗಿದ್ದರು. ಬಳಿಕ ಗುಜರಾತ್‌ನಾದ್ಯಂತ ಕೋಮು ಗಲಭೆ ನಡೆದು ಸುಮಾರು 1,200 ಮಂದಿ ಬಲಿಯಾಗಿದ್ದರು. ಇವರಲ್ಲಿ ಹೆಚ್ಚಿನವರು ಮುಸ್ಲಿಮರು.

ವಿಚಾರಣಾ ನ್ಯಾಯಾಲಯವು 11 ಮಂದಿಗೆ ನೀಡಿರುವ ಶಿಕ್ಷೆ ಸರಿಯಾಗಿಯೇ ಇದೆ. ಹಾಗಿದ್ದರೂ ಅವರ ಶಿಕ್ಷೆಯನ್ನು ಕಠಿಣ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅನಂತ್‌ ಎಸ್‌. ದವೆ ಮತ್ತು ಜಿ.ಆರ್‌. ಉಧ್ವಾನಿ ಅವರ ವಿಭಾಗೀಯ ಪೀಠ ಹೇಳಿದೆ. ಇತರ 20 ತಪ್ಪಿತಸ್ಥರಿಗೆ ವಿಶೇಷ ತನಿಖಾ ತಂಡದ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಮೇಲ್ಮನವಿಯ ವಿಚಾರಣೆ ಬಹಳ ಹಿಂದೆಯೇ ಪೂರ್ಣಗೊಂಡಿದ್ದರೂ ತೀರ್ಪು ಪ್ರಕಟಿಸಲು ವಿಳಂಬ ಆಗಿರುವುದಕ್ಕೆ ಪೀಠ ವಿಷಾದ ವ್ಯಕ್ತಪಡಿಸಿದೆ. ಘಟನೆಯಲ್ಲಿ ಗಾಯಗೊಂಡವರು, ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅಂದು ಇದ್ದ ಪ್ರಯಾಣಿಕರು, ರೈಲ್ವೆ ಸಿಬ್ಬಂದಿ, ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ, ಗೋದ್ರಾದ ಇಬ್ಬರು ಪೊಲೀಸರು, ಗುಜರಾತ್‌ ರೈಲ್ವೆ ಪೊಲೀಸ್ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯದ ಪರಿಣತರು ಮತ್ತು ತಪ್ಪಿತಸ್ಥರ ತಪ್ಪೊಪ್ಪಿಗೆ ಹೇಳಿಕೆಗಳ ಆಧಾರದಲ್ಲಿ ಹೈಕೋರ್ಟ್‌ ತೀರ್ಪು ಪ್ರಕಟಿಸಿದೆ.

63 ಆರೋಪಿಗಳ ಖುಲಾಸೆ ರದ್ದುಪಡಿಸಬೇಕು ಮತ್ತು ತಪ್ಪಿತಸ್ಥ ರಿಗೆ ವಿಧಿಸಲಾಗಿರುವ ಶಿಕ್ಷೆ ಹೆಚ್ಚಿಸಬೇಕು ಎಂದು ವಿಶೇಷ ತನಿಖಾ ತಂಡ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ವಜಾ ಮಾಡಿದೆ. ಶಿಕ್ಷೆ ರದ್ದು ಮಾಡಬೇಕು ಎಂದು ಕೋರಿ ತಪ್ಪಿತಸ್ಥರು ಸಲ್ಲಿಸಿರುವ ಅರ್ಜಿಯನ್ನೂ ವಜಾ ಮಾಡಲಾಗಿದೆ.

ವಿಚಾರಣಾ ನ್ಯಾಯಾಲಯಕೊಟ್ಟ ಶಿಕ್ಷೆ: ವಿಶೇಷ ಎಸ್‌ಐಟಿ ನ್ಯಾಯಾಲಯವು 2011ರ ಮಾರ್ಚ್‌ 1ರಂದು ಶಿಕ್ಷೆ ಪ್ರಕಟಿಸಿತ್ತು. 31 ಮಂದಿ ಅಪರಾಧಿಗಳೆಂದು ಹೇಳಿದ್ದ ನ್ಯಾಯಾಲಯ 63 ಆರೋಪಿಗಳನ್ನು ಖುಲಾಸೆ ಮಾಡಿತ್ತು. 11 ಮಂದಿಗೆ ಮರಣದಂಡನೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಘಟನೆ ಹಿಂದೆ ದೊಡ್ಡ ಸಂಚು ನಡೆದಿತ್ತು ಎಂಬ ಪ್ರಾಸಿಕ್ಯೂಷನ್‌ ವಾದವನ್ನು ನ್ಯಾಯಾಲಯ ಪುರಸ್ಕರಿಸಿತ್ತು.

ಈ 94 ಆರೋಪಿಗಳಲ್ಲಿ ಪ್ರಮುಖ ಆರೋಪಿಗಳಾದ ಮೌಲಾನಾ ಉಮರ್ಜಿ, ಮೊಹಮ್ಮದ್ ಹುಸೇನ್ ಕಲೊಟಾ, ಮೊಹಮ್ಮದ್ ಅನ್ಸಾರಿ ಮತ್ತು  ನನುಮಿಯಾ ಚೌಧುರಿ ಸೇರಿದಂತೆ 63 ಮಂದಿಯನ್ನು ಖುಲಾಸೆಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗುಜರಾತ್‌ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಗೋಧ್ರಾ ರೈಲು ಹತ್ಯಾಕಾಂಡದ ನಂತರದ ಪ್ರಮುಖ ಘಟನಾವಳಿಗಳು :

2002 ಫೆ. 27: ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರಿಂದ 59 ಕರಸೇವಕರ ಸಜೀವ ದಹನ.

ಫೆ. 28- ಮಾರ್ಚ್ 31: ಗುಜರಾತ್‌ನ ಅನೇಕ ಕಡೆಗಳಲ್ಲಿ ಕೋಮು ಗಲಭೆ, 1,200 ಮಂದಿಯ ಹತ್ಯೆ. ಸತ್ತವರಲ್ಲಿ ಬಹುತೇಕರು ಮುಸ್ಲಿಮರು.

ಮಾರ್ಚ್ 3: ರೈಲು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಂಧಿಸಿದವರ ಮೇಲೆ ‘ಪೋಟಾ’ ಕಾಯ್ದೆ ಹೇರಿಕೆ.

ಮಾರ್ಚ್ 6: ಗೋಧ್ರಾ ಹತ್ಯಾಕಾಂಡ ಮತ್ತು ನಂತರ ನಡೆದ ಕೋಮು ಗಲಭೆಗಳ ತನಿಖೆಗೆ ವಿಚಾರಣಾ ಆಯೋಗದ ನೇಮಕ.

ಮಾರ್ಚ್ 9: ಬಂಧಿತರ ವಿರುದ್ಧ ಐಪಿಸಿ ಕಲಂ 120 ಬಿ ಪ್ರಕಾರ ಕ್ರಿಮಿನಲ್ ಸಂಚಿನ ಆರೋಪ.

ಮಾರ್ಚ್ 27: ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು, ಬಂಧಿತರ ವಿರುದ್ಧ ಹೇರಲಾಗಿದ್ದ ‘ಪೋಟಾ’ ರದ್ದು.

ಮೇ 27:  54  ಜನರ ವಿರುದ್ಧ ಮೊದಲ ದೋಷಾರೋಪ ಪಟ್ಟಿ ಸಲ್ಲಿಕೆ.

2003, ಫೆ. 18: ಬಿಜೆಪಿ ರಾಜ್ಯದಲ್ಲಿ ಪುನಃ ಆಯ್ಕೆಯಾದ ಬಳಿಕ ಬಂಧಿತರ ವಿರುದ್ಧ ಮತ್ತೆ ‘ಪೋಟಾ’ ಹೇರಿಕೆ.

2003, ನ. 21: ಗೋಧ್ರಾ ಹತ್ಯಾಕಾಂಡ ಸೇರಿದಂತೆ ಎಲ್ಲ ಕೋಮು ಗಲಭೆಗಳ ನ್ಯಾಯಾಂಗ ವಿಚಾರಣೆ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತಡೆ.

2004, ಸೆ. 4: ಲಾಲು ಪ್ರಸಾದ ರೈಲ್ವೆ ಸಚಿವರಾಗಿದ್ದಾಗ ಗೋದ್ರಾ ಘಟನೆಯ ತನಿಖೆಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯು. ಸಿ. ಬ್ಯಾನರ್ಜಿ ಸಮಿತಿ ನೇಮಕ.

2004, ಸೆ. 21: ಕೇಂದ್ರದ ಯುಪಿಎ ಸರ್ಕಾರ ಪೋಟಾ ರದ್ದುಪಡಿಸಿದ್ದರಿಂದ ಗೋದ್ರಾ ಬಂಧಿತರ ವಿರುದ್ಧ ಪೋಟಾ ಕಾಯ್ದೆಯಡಿ ಹೂಡಲಾಗಿದ್ದ ಪ್ರಕರಣ ರದ್ದಿಗೆ ಪರಿಶೀಲನೆ.

2005, ಜ. 17:  ಯು. ಸಿ.ಬ್ಯಾನರ್ಜಿ ಸಮಿತಿಯಿಂದ ಪ್ರಾಥಮಿಕ ವರದಿ ಸಲ್ಲಿಕೆ. ಎಸ್-6 ಬೋಗಿಯಲ್ಲಯೇ ಬೆಂಕಿ ಆಕಸ್ಮಿಕ ಎಂಬ ಅಭಿಪ್ರಾಯ ನೀಡಿಕೆ.

2005, ಮೇ 16: ಆಪಾದಿತರ ವಿರುದ್ಧ ಪೋಟಾ ಕಾಯ್ದೆಯಡಿ ಪ್ರಕರಣ ದಾಖಲಿಸದಂತೆ ಪೋಟಾ ಪುನರ್ವಿಮರ್ಶಾ ಸಮಿತಿಯ ಸಲಹೆ.

2006, ಅ. 13: ನಾನಾವತಿ ಆಯೋಗವು ಎಲ್ಲ ಗಲಭೆಗಳ ವಿಚಾರಣೆ ನಡೆಸುತ್ತಿರುವುದರಿಂದ ಬ್ಯಾನರ್ಜಿ ಸಮಿತಿ ರಚನೆ ಕಾನೂನು ಮತ್ತು ಸಂವಿಧಾನ ಬಾಹಿರ ಹಾಗೂ ಈ ಸಮಿತಿಯ ಪ್ರಾಥಮಿಕ ವರದಿಗೆ ಬೆಲೆ ಇಲ್ಲ ಎಂದು ಗುಜರಾತ್ ಹೈಕೋರ್ಟ್ ತೀರ್ಪು.

2008, ಮಾರ್ಚ್ 26: ಗೋದ್ರಾ ಹತ್ಯಾಕಾಂಡ ಮತ್ತು ಇತರ ಎಂಟು ಕೋಮು ಗಲಭೆಗಳ ತನಿಖಗೆ ಸುಪ್ರೀಂಕೋರ್ಟ್‌ನಿಂದ ವಿಶೇಷ ತನಿಖಾ ತಂಡ ರಚನೆ.

2008, ಸೆ. 18: ನಾನಾವತಿ ಆಯೋಗದ ವರದಿ ಸಲ್ಲಿಕೆ. ಪೂರ್ವ ಯೋಜಿತ ಸಂಚಿನಿಂದ ನಡೆದ  ಕೃತ್ಯ, ಪೆಟ್ರೋಲ್ ಸುರಿದು ಬೋಗಿಗೆ ಬೆಂಕಿ ಹಚ್ಚಲಾಗಿದೆ ಎಂಬ ಅಂಶವನ್ನು ಒಳಗೊಂಡ ವರದಿ.

2009, ಫೆ. 12: ಪೋಟಾ ಪುನರ್ವಿಮರ್ಶಾ ಸಮಿತಿಯ ಸಲಹೆಗೆ ಹೈಕೋರ್ಟ್ ಮಾನ್ಯತೆ.

2009, ಫೆ. 20: ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗೋದ್ರಾ ಸಂತ್ರಸ್ತರಿಂದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ.

2009, ಮೇ 1: ಗೋದ್ರಾ ಹತ್ಯಾಕಾಂಡ ಮತ್ತು ಇತರ ಕೋಮು ಗಲಭೆ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂಕೋರ್ಟ್.

2009, ಜೂನ್ 1: ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಗೋದ್ರಾ ಹತ್ಯಾಕಾಂಡ ವಿಚಾರಣೆ ಪುನರಾರಂಭ.

2010, ಮೇ 6: ಗೋದ್ರಾ ಹತ್ಯಾಕಾಂಡ ಪ್ರಕರಣ ಸೇರಿದಂತೆ 9 ಕೋಮು ಗಲಭೆ ಪ್ರಕರಣದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ.

2010, ಸೆ. 28: ವಿಚಾರಣೆ ಮುಕ್ತಾಯ. ತಡೆಯಾಜ್ಞೆ ಇದ್ದುದರಿಂದ ತೀರ್ಪು ಪ್ರಕಟನೆ ಮುಂದಕ್ಕೆ.

2011, ಜ. 18: ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ತೆರವು.

2011, ಫೆ. 22: ವಿಶೇಷ ತ್ವರಿತ ನ್ಯಾಯಾಲಯದಿಂದ ತೀರ್ಪು ಪ್ರಕಟ .

2011, ಮಾರ್ಚ್‌ 1: ಗುಜರಾತ್ ರೈಲು ಹತ್ಯಾಕಾಂಡದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದ 31 ಜನರ ಪೈಕಿ 11 ಮಂದಿಗೆ ಮರಣದಂಡನೆ ಮತ್ತು ಇತರ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT