ನವದೆಹಲಿ (ಪಿಟಿಐ): ದೇಶದಾದ್ಯಂತ ಏಕರೂಪದ ಡೀಸೆಲ್ ಬೆಲೆ ನಿಗದಿಪಡಿಸುವ ಸಂಬಂಧ ಕೇಂದ್ರ ಸರ್ಕಾರ, ಕರ್ನಾಟಕ ಸೇರಿದಂತೆ 12 ರಾಜ್ಯಗಳ ಸಭೆ ಕರೆದಿದೆ.
ಇದೇ ಜುಲೈ 30 , 31ರಂದು ಕರ್ನಾಟಕ, ಕೇರಳ, ಅಸ್ಸಾಂ, ಬಿಹಾರ, ಹರಿಯಾಣ, ಉತ್ತರಾಖಂಡ ರಾಜ್ಯಗಳ ಸಭೆ ಹಾಗೂ ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ತಾನ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಸಭೆಯನ್ನು ಆಗಸ್ಟ್ 5, 6ರಂದು ಕರೆಯಲಾಗಿದೆ. ಈ ರಾಜ್ಯಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿವಿಧ ಹಂತಗಳಲ್ಲಿ ವಿಧಿಸಲಾಗುವ ರಾಜ್ಯ ತೆರಿಗೆಗಳನ್ನು ಕಡಿತಗೊಳಿಸುವುದು ಮತ್ತು ದೇಶದಾದ್ಯಂತ ಡೀಸೆಲ್ ಮೇಲೆ ಏಕರೂಪದ ತೆರಿಗೆ ಪದ್ಧತಿ ಅಳವಡಿಸುವ ಮೂಲಕ ಡೀಸೆಲ್ ಬೆಲೆಯನ್ನು ತಗ್ಗಿಸಲು ಪೆಟ್ರೋಲಿಯಂ ಸಚಿವಾಲಯ ಈ ಸಭೆ ಕರೆದಿದೆ.
ರಾಜ್ಯಗಳಲ್ಲಿ ಜಾರಿಯಲ್ಲಿರುವ ಹಲವು ಹಂತಗಳ ತೆರಿಗೆ ನೀತಿ ಕೈಬಿಟ್ಟು ಏಕರೂಪ ತೆರಿಗೆ ನೀತಿ ಅಳವಡಿಸಿಕೊಳ್ಳುವಂತೆ ಪೆಟ್ರೋಲಿಯಂ ಸಚಿವಾಲಯ ಜುಲೈ 9ರಂದು 12 ರಾಜ್ಯಗಳಿಗೆ ಪತ್ರ ಬರೆದಿತ್ತು. ಸ್ಥಳೀಯ ಸೇವಾ ತೆರಿಗೆ, ಮೌಲ್ಯ ವರ್ಧಿತ ತೆರಿಗೆ (ವ್ಯಾಟ್), ಅಕ್ಟ್ರಾಯ್ ಮುಂತಾದ ತೆರಿಗೆಗಳಿಂದ ಈ ರಾಜ್ಯಗಳ ಗ್ರಾಹಕರು ಪ್ರತಿ ಲೀಟರ್ ಡೀಸೆಲ್ಗೆ ಸುಮಾರು ಏಳು ರೂಪಾಯಿ ಹೆಚ್ಚುವರಿಯಾಗಿ ನೀಡುತ್ತಿದ್ದಾರೆ.
ದೆಹಲಿಯಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 57.84 ರೂಪಾಯಿಗಳಾದರೆ ಮುಂಬೈನಲ್ಲಿ 66.01 ರೂಪಾಯಿ ಆಗಿರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಈ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಇದೇ ರೀತಿಯ ವ್ಯತ್ಯಾಸ ಪೆಟ್ರೋಲ್ ಬೆಲೆಯಲ್ಲೂ ಕಂಡು ಬರುತ್ತವೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 73.54 ರೂಪಾಯಿಗಳಾದರೆ ಮುಂಬೈನಲ್ಲಿ 81.68 ರೂಪಾಯಿ ಹಾಗೂ ಮಹಾರಾಷ್ಟ್ರದ ಇನ್ನುಳಿದ ಸ್ಥಳಗಳಲ್ಲಿ 82.16 ರೂಪಾಯಿಗಳಾಗಿರುತ್ತದೆ.
ಸ್ಥಳೀಯ ತೆರಿಗೆಗಳಿಂದ ಈ ರಾಜ್ಯಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಸಹಜವಾಗಿ ದುಬಾರಿಯಾಗಿದೆ. ಇದರಿಂದ ನೆರೆಯ ರಾಜ್ಯಗಳಿಗೆ ಆದಾಯ ಹರಿದು ಹೋಗುತ್ತದೆ.
ಒಂದು ವೆಳೆ ಎಲ್ಲ ರಾಜ್ಯಗಳಲ್ಲೂ ಏಕರೂಪ ತೆರಿಗೆ ವ್ಯವಸ್ಥೆ ಜಾರಿಯಾದರೆ ಎಲ್ಲ ಗ್ರಾಹಕರಿಗೂ ಅನುಕೂಲವಾಗುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯದ ಮೂಲಗಳು ತಿಳಿಸಿವೆ.