ನವದೆಹಲಿ (ಐಎಎನ್ಎಸ್): ಸುಪ್ರೀಂ ಕೋರ್ಟ್ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎಚ್. ಎಲ್ ದತ್ತು ಅವರ ನೇಮಕವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ‘ರಾ’ದ ಮಾಜಿ ಅಧಿಕಾರಿ ಹಾಗೂ ವಕೀಲೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.
2011ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದಾಗ ತಾನು ವಾದಿಸಿದ್ದ ಎಲ್ಲ ಪ್ರಕರಣಗಳನ್ನು ನ್ಯಾಯಮೂರ್ತಿ ದತ್ತು ಅವರು ವಜಾ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.‘ಸುಪ್ರೀಂ ಕೋರ್ಟ್ ರೂಪಿಸಿರುವ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಇನ್ನೊಬ್ಬರು ಲೈಂಗಿಕ ಕಿರುಕುಳ ನೀಡಿದರೂ ನನ್ನನ್ನು ರಕ್ಷಿಸುವುದು ದತ್ತು ಅವರ ಹೊಣೆಗಾರಿಕೆಯಾಗಿತ್ತು. ಆದರೆ ಅವರೇ ನನಗೆ ತೀವ್ರವಾದ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು 51 ವರ್ಷ ವಯಸ್ಸಿನ ಮಹಿಳೆ ಆರೋಪಿಸಿದ್ದಾರೆ. ಹಾಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರ ನಿಯೋಜನೆಯನ್ನು ರದ್ದುಪಡಿಸಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಪ್ರದೀಪ್ ನಂದರಜೋಗ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿಯನ್ನು ವಜಾ ಮಾಡಿತು. ರಾಷ್ಟ್ರಪತಿ ಅವರು ಈಗಾಗಲೇ ದತ್ತು ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜನೆ ಮಾಡಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂದು ಪೀಠ ಹೇಳಿತು.
ಮಹಿಳೆಯ ವಾದವನ್ನು ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ವಿರೋಧಿಸಿದರು. ಇದು ಅತ್ಯಂತ ಕ್ಷುಲ್ಲಕವಾದ ದೂರು ಎಂದು ಅವರು ವಾದಿಸಿದರು.ಮಹಿಳೆಯು 1987ರ ತಂಡದ ‘ರಾ’ದ ಒಂದನೇ ಶ್ರೇಣಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. 2009ರಲ್ಲಿ ಅವರು ಕಡ್ಡಾಯ ನಿವೃತ್ತಿ ಪಡೆದುಕೊಂಡರು.