ನವದೆಹಲಿ(ಪಿಟಿಐ): ಭಾರತದಿಂದ ಆಮದು ಮಾಡಿಕೊಂಡ ಧೃವ ಹೆಲಿಕಾಪ್ಟರ್ ಗಳನ್ನು ಬಳಸದಿರಲು ಇಕ್ವೆಡಾರ್ ವಾಯ ಪಡೆ ನಿರ್ಧರಿಸಿದೆ. ಈ ಹೆಲಿಕಾಪ್ಟರ್ ಪದೇ ಪದೆ ಅಪಘಾತಕ್ಕೀಡಾಗುತ್ತಿರುವುದೇ ಕಾರಣ.
ಎಚ್ ಎಎಲ್ ನಿರ್ಮಿತ ಇಂತಹ ಏಳು ಹೆಲಿಕಾಪ್ಟರ್ ಗಳನ್ನು ಇಕ್ವೆಡಾರ್ ನ ವಾಯುಪಡೆ 2009ರಲ್ಲಿ ಅಂದಾಜು 4.5 ಕೋಟಿ ಡಾಲರ್ ಗಳಿಗೆ ಖರೀದಿಸಿತ್ತು. ಭಾರತ ಇಂತಹ ಇನ್ನಷ್ಟು ಹೆಲಿಕಾಪ್ಟರ್ ಗಳನ್ನು ರಫ್ತು ಮಾಡುವ ಗುರಿ ಹೊಂದಿದೆ. ಆದರೆ, ಇಕ್ವೆಡಾರ್ ನ ಈ ನಿರ್ಧಾರದಿಂದಾಗಿ ಭಾರತಕ್ಕೆ ಹಿನ್ನಡೆಯಾದಂತಾಗಿದೆ.
ಇತ್ತೀಚಿಗೆ ಮೂರು ಧೃವ ಹೆಲಿಕಾಪ್ಟರ್ ಗಳು ಸರಣಿ ಅಪಘಾತಕ್ಕೊಳಗಾಗಿವೆ. ಹೀಗಾಗಿ, ಸಂಪೂರ್ಣ ಭದ್ರತಾ ಪರೀಕ್ಷೆ ನಡೆಸಿ ಬಳಕೆಗೆ ಯೋಗ್ಯ ಎಂದು ಖಾತ್ರಿಯಾದ ಬಳಿಕವೇ ಇವುಗಳನ್ನು ಬಳಸಿಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.