ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್ ಪುರಸ್ಕೃತರು ತಬ್ಬಿಬ್ಬು!

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಐಎಎನ್‌ಎಸ್): ವಯಸ್ಸಾಗುತ್ತಿದ್ದಂತೆಯೇ ಕೂದಲೇಕೆ ಬೆಳ್ಳಗಾಗುತ್ತದೆ? ಚಂದ್ರನಲ್ಲಿರುವ ನೀರನ್ನು ಭೂಮಿಗೇಕೆ ತರುತ್ತಿಲ್ಲ?...

ಮಕ್ಕಳು ಕೇಳಿದ ಇಂತಹ ಪ್ರಶ್ನೆಗಳಿಗೆ ನೊಬೆಲ್ ಪುರಸ್ಕೃತ ವಿಜ್ಞಾನಿಗಳು ತಕ್ಷಣಕ್ಕೆ ಉತ್ತರ ನೀಡಲಾಗದೇ ಕೆಲಕಾಲ ತಬ್ಬಿಬ್ಬಾದರು.

ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ವಿಜ್ಞಾನ ಸಮಾವೇಶದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡಿರುವ ಮಕ್ಕಳು, ದಿನನಿತ್ಯ ಜನಸಾಮಾನ್ಯರನ್ನು ಕಾಡುವ ಕೆಲ ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ವಿಜ್ಞಾನಿಗಳನ್ನು ಚಿಂತನೆಗೆ ಹಚ್ಚಿದ್ದು ವಿಶೇಷವಾಗಿತ್ತು.

ಹರಿಯಾಣದ 7ನೇ ತರಗತಿ ವಿದ್ಯಾರ್ಥಿ ಮನ್ವೇಂದ್ರ ಶರ್ಮ, ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಕೂದಲು ಏಕೆ ಬಿಳಿ ಬಣ್ಣಕ್ಕೆ ತಿರುಗುತ್ತದೆ ಎಂದು ವಿಜ್ಞಾನಿ ರಿಚರ್ಡ್ ಆರ್. ಅರ್ನ್‌ಸ್ಟ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಅವರು ಯಾವುದೇ ತಾರ್ಕಿಕವಾದ ಉತ್ತರ ನೀಡದೇ ಇದ್ದರೂ `ಇದು ಕಠಿಣವಾದ ಮತ್ತು ಇಂದಿಗೂ ಪರಿಹರಿಸಲಾಗದ ಪ್ರಶ್ನೆ. ಇದೊಂದು ಜೈವಿಕ ಕ್ರಿಯೆ ಅಷ್ಟೇ. ಆದರೆ ಇದರಿಂದ ಯಾವುದೇ ರೀತಿಯ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ~ ಎಂದು ಹೇಳಿದರು.

ಜೈಪುರ ಕೇಂದ್ರೀಯ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿ ಶಿವನ್ ಪಾಂಡೆ, ಚಂದ್ರನಲ್ಲಿರುವ ಸಾಕಷ್ಟು ಪ್ರಮಾಣದ ನೀರನ್ನು ಭೂಮಿ ಮೇಲೆ ಬಳಸಿಕೊಂಡು ನೀರಿನ ಕೊರತೆ ಏಕೆ ನೀಗಿಸಬಾರದು? ಎಂದು ಪ್ರಶ್ನಿಸಿದ. ಇದಕ್ಕೆ ಅರ್ನ್‌ಸ್ಟ್, `ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನೂ ಬಳಸಿಕೊಳ್ಳಲು ಆಗುವುದಿಲ್ಲ. ಕೆಲವು ಸೌಂದರ್ಯಕ್ಕೆ ಮಾತ್ರ ಇವೆ~ ಎಂದು ಉತ್ತರಿಸಿದರು.

`ಅಂಡಮಾನ್ ಮತ್ತು ನಿಕೊಬಾರ್ ದ್ವೀಪದ 6ನೇ ತರಗತಿ ವಿದ್ಯಾರ್ಥಿನಿ ಬಹಾರ್ ಸ್ತುತಿ ದತ್ತ, ಮೊಬೈಲ್ ಫೋನುಗಳಿಂದ ಹೊರಸೂಸುವ ವಿಕಿರಣವನ್ನು ಹೇಗೆ ತಡೆಗಟ್ಟಬಹುದು ಎಂದು ಕೇಳಿದಾಗ, `ಮೊಬೈಲ್ ಬಳಕೆಯಿಂದ ಸಕಾರಾತ್ಮಕ ಮತ್ತು ನಕಾರಾತ್ಮಕವಾದ ಎರಡೂ ಬಗೆಯ ಪರಿಣಾಮಗಳು ಉಂಟಾಗುತ್ತವೆ.  ಮೊಬೈಲ್‌ಗಳು ವಿಕಿರಣ ಹೊರಸೂಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಅಧ್ಯಯನ ನಡೆದಿಲ್ಲ. ಆದರೆ, ನಾಲ್ಕು ಗಂಟೆಗಳಿಗಿಂತ ಅಧಿಕ ಸಮಯ ಮೊಬೈಲ್ ಬಳಸಿದರೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ~ ಎಂದು ಅರ್ಸ್ಟ್ ಹೇಳಿದರು.

ಕಳಿಂಗ ಕೈಗಾರಿಕಾ ತಾಂತ್ರಿಕ ಸಂಸ್ಥೆಯಲ್ಲಿ (ಕೆಐಐಟಿ) ನಡೆಯುತ್ತಿರುವ 99ನೇ ಅಖಿಲ ಭಾರತ ವಿಜ್ಞಾನ ಸಮಾವೇಶ, ವಿಜ್ಞಾನ ಕ್ಷೇತ್ರದ ವಿವಿಧೆಡೆಯ ಬುದ್ಧಿವಂತ ಮಕ್ಕಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ಚಿಣ್ಣರಿಂದ ತೂರಿಬಂದ ಇತರ ಪ್ರಶ್ನೆಗಳಿಗೆ ನೊಬೆಲ್ ಪುರಸ್ಕೃತರಾದ ರಾಲ್ಫ್ ಎಂ.ಜಿಂಕರ್‌ನಗೆಲ್, ಕರ್ಟ್ ವುತ್‌ರಿಚ್ ಉತ್ತರಿಸಿದರು.

ಮಂಗಳವಾರ ಆರಂಭವಾದ ಐದು ದಿನಗಳ ಸಮಾವೇಶದಲ್ಲಿ ಒಂದು ಸಾವಿರ ಮಕ್ಕಳು ಭಾಗವಹಿಸಿದ್ದಾರೆ. ಪ್ರತಿದಿನ ವಿದ್ಯಾರ್ಥಿಗಳು ನೊಬೆಲ್ ಪುರಸ್ಕೃತರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಅಲ್ಲದೆ ವಿಜ್ಞಾನ ಆವಿಷ್ಕಾರದ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. 1993ರಲ್ಲಿ ಮಕ್ಕಳ ಪ್ರಥಮ ವಿಜ್ಞಾನ ಸಮಾವೇಶ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT