ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಸಮೀಕ್ಷೆಗಳು ಎಷ್ಟರಮಟ್ಟಿಗೆ ನಿಜವಾಗಿವೆ?

Last Updated 19 ಮೇ 2019, 5:48 IST
ಅಕ್ಷರ ಗಾತ್ರ

ನವದೆಹಲಿ: ಕನಿಷ್ಠ ಪಕ್ಷ ಕಳೆದ ಕೆಲ ವರ್ಷಗಳ ಚುನಾವಣೆಗಳ ಮಟ್ಟಿಗೆ ಹೇಳುವುದಾದರೆ ಮತಗಟ್ಟೆ ಸಮೀಕ್ಷೆಗಳ ಭವಿಷ್ಯವಾಣಿ ಅತ್ತ ಪೂರ್ಣ ನಿಜವೂ ಆಗದೆ ಇತ್ತ ಪೂರ್ಣ ಸತ್ಯದೂರವೂ ಆಗದೆ ಮಿಶ್ರ ನೆಲೆಯಲ್ಲಿ ನಿಂತಿದ್ದನ್ನು ಕಾಣಬಹುದು. ತಮಿಳುನಾಡು ಮತ್ತು ಬಿಹಾರ ವಿಧಾನಸಭೆ ಚುನಾವಣೆಗಳಲ್ಲಿ ಸಮೀಕ್ಷೆಗಳು ಸಂಪೂರ್ಣ ಸುಳ್ಳಾಗಿದ್ದುಂಟು.

2016ರ ಏಪ್ರಿಲ್-ಮೇ ತಿಂಗಳ ಅಸ್ಸಾಂ, ಕೇರಳ, ಪುದುಚೇರಿ ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆಗಳಿಗೆ ಜರುಗಿದ ಚುನಾವಣೆಗಳ ಮತಗಟ್ಟೆ ಸಮೀಕ್ಷೆಗಳು ಬಹುತೇಕ ನಿಖರವಾಗಿದ್ದವು.

ಆದರೆ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಸಮೀಕ್ಷೆಗಳು ದೊಡ್ಡ ಪ್ರಮಾಣದಲ್ಲಿ ಎಡವಿದ್ದವು. ಬಹುತೇಕ ಸಮೀಕ್ಷೆಗಳು ಜಯಲಲಿತಾ ಅವರ ಅಣ್ಣಾ ಡಿ.ಎಂ.ಕೆ. ಆಡಳಿತ ವಿರೋಧಿ ಅಲೆ ಎದುರಿಸಿದ್ದು, ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದವು. ಡಿ.ಎಂ.ಕೆ. ಮತ್ತು ಕಾಂಗ್ರೆಸ್ ಮೈತ್ರಿಕೂಟದ ಗೆಲುವನ್ನು ಸಾರಿದ್ದವು.

ಏಕ್ಸಿಸ್- ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ ಪ್ರಕಾರ ಒಟ್ಟು 234 ಸೀಟುಗಳ ಪೈಕಿ ಡಿ.ಎಂ.ಕೆ.-ಕಾಂಗ್ರೆಸ್ ಮೈತ್ರಿಕೂಟಕ್ಕೆ 120ರಿಂದ 140 ಸೀಟುಗಳು, ಅಣ್ಣಾ ಡಿ.ಎಂ.ಕೆ.ಗೆ 90ರಿಂದ 110 ಸೀಟುಗಳು ದೊರೆಯಬೇಕಿತ್ತು. ನ್ಯೂಸ್ ನೇಷನ್ ಟೀವಿ ಸಮೀಕ್ಷೆ ಡಿ.ಎಂ.ಕೆ.- ಕಾಂಗ್ರೆಸ್ ಮೈತ್ರಿಕೂಟಕ್ಕೆ 114ರಿಂದ 118 ಸೀಟುಗಳನ್ನು ಮತ್ತು ಅಣ್ಣಾ ಡಿ.ಎಂ.ಕೆ. ಗೆ 95-99 ಸೀಟುಗಳನ್ನು ನೀಡಿತ್ತು.

ಆದರೆ ಫಲಿತಾಂಶ ಹೊರಬಿದ್ದಾಗ ಅಣ್ಣಾ ಡಿ.ಎಂ.ಕೆ. 136 ಸೀಟುಗಳ ಘನವಿಜಯ ಸಾಧಿಸಿತ್ತು.

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಎಲ್ಲ ಸಮೀಕ್ಷೆಗಳು ಬಿಜೆಪಿಯ ಗೆಲುವಿನ ಭವಿಷ್ಯ ನುಡಿದಿದ್ದವು. ಎ.ಬಿ.ಪಿ. ಸಮೀಕ್ಷೆಯ ಪ್ರಕಾರ ಬಿಜೆಪಿಗೆ 81 ಸೀಟುಗಳು, ಚಾಣಕ್ಯ ಪ್ರಕಾರ 90 ಸೀಟುಗಳು ದೊರೆಯಬೇಕಿತ್ತು. ಸರಳ ಬಹುಮತದ ಸಂಖ್ಯೆ 64. ಫಲಿತಾಂಶಗಳು ಹೊರಬಿದ್ದಾಗ ಬಿಜೆಪಿಗೆ 86 ಸೀಟುಗಳ ಬಹುಮತ ದೊರೆತಿತ್ತು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಇಂಡಿಯಾ ಟುಡೇ ಟೀವಿ ಸಮೀಕ್ಷೆ 243 ಸೀಟುಗಳ ಭಾರೀ ಬಹುಮತದ ಭವಿಷ್ಯ ನುಡಿದಿತ್ತು. ಸರಳ ಬಹುಮತಕ್ಕೆ ಬೇಕಿದ್ದ ಸೀಟುಗಳ ಸಂಖ್ಯೆ 148. ಚಾಣಕ್ಯದ ಸಮೀಕ್ಷೆ ಪ್ರಕಾರ ಮಮತಾ ಅವರಿಗೆ 210 ಸೀಟುಗಳು, ಸಿ-ವೋಟರ್ ಪ್ರಕಾರ 167 ಸೀಟುಗಳು ಸಿಗಬೇಕಿತ್ತು. ಫಲಿತಾಂಶಗಳು ಹೊರಬಿದ್ದಾಗ ತೃಣಮೂಲ ಕಾಂಗ್ರೆಸ್ ಪಕ್ಷ 211 ಸೀಟುಗಳನ್ನು ಗೆದ್ದಿತ್ತು.

ಕೇರಳದಲ್ಲಿಯೂ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಜನತಾಂತ್ರಿಕ ವೇದಿಕೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಒಟ್ಟು 140 ಸೀಟುಗಳ ಪೈಕಿ ಎಡರಂಗವು ತೆಳು ಬಹುಮತ ಗಳಿಸಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಸಾರಿದ್ದವು. ಸಿ-ವೋಟರ್ ಪ್ರಕಾರ ಎಡರಂಗಕ್ಕೆ 78 ಸೀಟುಗಳು ದಕ್ಕಲಿವೆ ಎಂದಿತ್ತು. ಫಲಿತಾಂಶ ಹೊರಬಿದ್ದಾಗ ಎಡರಂಗಕ್ಕೆ 91 ಸೀಟುಗಳು ದೊರೆತಿದ್ದವು.

ಪುದುಚೇರಿಯಲ್ಲಿ ಕಾಂಗ್ರೆಸ್-ಡಿ.ಎಂ.ಕೆ. ಮೈತ್ರಿಕೂಟ ಗೆಲ್ಲುತ್ತದೆಂಬ ಬಹುತೇಕ ಸಮೀಕ್ಷೆಗಳು ನಿಜವಾಗಿದ್ದವು.

2015ರ ಬಿಹಾರ ವಿಧಾನಸಭೆ ಚುನಾವಣೆಗಳಲ್ಲಿ ಎ.ಬಿ.ಪಿ.-ನೀಲ್ಸನ್ ಪ್ರಕಾರ ಒಟ್ಟು 243 ಸೀಟುಗಳ ಪೈಕಿ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ, ಲಾಲೂ ಯಾದವ್ ಅವರ ರಾಷ್ಟ್ರೀಯ ಜನತಾದಳ ಹಾಗೂ ಕಾಂಗ್ರೆಸ್ ನ ಮಹಾಮೈತ್ರಿ ಕೂಟಕ್ಕೆ 130 ಮತ್ತು ಬಿಜೆಪಿಗೆ 108 ಸೀಟುಗಳು ದೊರೆಯಬೇಕಿತ್ತು. ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆ ಪ್ರಕಾರ ಮಹಾಮೈತ್ರಿ ಕೂಟಕ್ಕೆ 122 ಸೀಟುಗಳ ಮಹಾಮೈತ್ರಿ ಕೂಟಕ್ಕೆ 122 ಮತ್ತು ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ 111 ಸೀಟುಗಳು ದಕ್ಕಬೇಕಿತ್ತು.

ಆದರೆ ಫಲಿತಾಂಶ ಹೊರಬಿದ್ದಾಗ ನಿತೀಶ್ ಅವರ ಮಹಾಮೇತ್ರಿ ಕೂಟಕ್ಕೆ 178 ಸೀಟುಗಳ ಭಾರೀ ಗೆಲುವು ದೊರೆತಿತ್ತು.

2014ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟಕ್ಕೆ (ಎನ್.ಡಿ.ಎ) ಬಹುಮತ ದೊರೆಯುವ ಇಲ್ಲವೇ ಬಹುಮತದ ಹೊಸ್ತಿಲನ್ನು ತಲುಪಲಿದೆ ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಒಕ್ಕೂರಲಿನಿಂದ ಸಾರಿದ್ದವು. ಬಿಜೆಪಿ ಹಿಂದೆಂದಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಈ ಸಂಖ್ಯೆ 200 ರಿಂದ 300ರ ಒಳಗೆ ಇರಲಿದೆ ಎಂದೂ ಹೇಳಿದ್ದವು.

ಫಲಿತಾಂಶ ಹೊರಬಿದ್ದ ನಂತರ ನ್ಯೂಸ್-24 ಮತ್ತು ಟುಡೇಸ್ ಚಾಣಕ್ಯ ಒಟ್ಟಾಗಿ ನಡೆಸಿದ್ದ ಸಮೀಕ್ಷೆಯ ಭವಿಷ್ಯ ವಾಸ್ತವಕ್ಕೆ ಬಲು ಹತ್ತಿರವಿತ್ತು. ಬಿಜೆಪಿ ನೇತೃತ್ವದ ಎನ್.ಡಿ.ಎ.ಗೆ 334 ಸೀಟುಗಳು, ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಗೆ ಕೇವಲ 60 ಸೀಟುಗಳು ದೊರೆತವು. ಖುದ್ದು ಬಿಜೆಪಿ 282 ಸೀಟುಗಳನ್ನು ಗೆದ್ದಿತ್ತು. ಕಾಂಗ್ರೆಸ್ ಸಂಖ್ಯಾಬಲ 45ಕ್ಕೆ ಭಾರೀ ಕುಸಿತ ಕಂಡಿತ್ತು.

ನ್ಯೂಸ್24 ಮತ್ತು ಟುಡೇಸ್ ಚಾಣಕ್ಯ ನುಡಿದಿದ್ದ ಭವಿಷ್ಯ-ಎನ್.ಡಿ.ಎ. ಗೆ 340 ಸೀಟುಗಳು. ಯು.ಪಿ.ಎ.ಗೆ 70 ಸೀಟುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT