ನವದೆಹಲಿ: 2017ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪಡೆದ ಅಂಕಗಳ ವಿವರವನ್ನು ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸಿದ್ದು, ಮೊದಲ ಸ್ಥಾನ ಪಡೆದ ದುರಿಶೆಟ್ಟಿ ಅನುದೀಪ್ ಶೇ 55.60ರಷ್ಟು ಅಂಕ ಪಡೆದಿದ್ದಾರೆ.
28 ವರ್ಷದ, ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿರುವ ಅನುದೀಪ್ 2,025ಕ್ಕೆ 1,126 ಅಂಕಗಳನ್ನು ಪಡೆದಿದ್ದಾರೆ. ಇದರಲ್ಲಿ ಲಿಖಿತ ಪರೀಕ್ಷೆಯಲ್ಲಿ 950 ಹಾಗೂ ಸಂದರ್ಶನದಲ್ಲಿ 176 ಅಂಕಗಳನ್ನು ಪಡೆದಿದ್ದಾರೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಎರಡನೇ ಸ್ಥಾನ ಪಡೆದಿರುವ ಅನು ಕುಮಾರಿ ಶೇ 55.50 ರಷ್ಟು (1,124 ಅಂಕ), ತೃತೀಯ ಸ್ಥಾನದಲ್ಲಿದ್ದ ಸಚಿನ್ ಗುಪ್ತ ಶೇ 55.40ರಷ್ಟು (1,122) ಅಂಕ ಪಡೆದಿರುವುದು ನಾಗರಿಕ ಸೇವಾ ಪರೀಕ್ಷೆಯು ಕಠಿಣವಾಗಿತ್ತು ಎಂಬುದನ್ನು ತೋರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.