ನವದೆಹಲಿ: ಕರ್ನಾಟಕ, ದೆಹಲಿ ಹಾಗೂ ಮಹಾರಾಷ್ಟ್ರ ಸೇರಿದಂತೆ ೯ ರಾಜ್ಯಗಳಲ್ಲಿನ ರಿಯಲ್ ಎಸ್ಟೇಟ್ ಕಂಪೆನಿಗಳು ಖರೀದಿದಾರರಿಂದ ಕಪ್ಪು ಹಣ ತೆಗೆದುಕೊಳ್ಳುತ್ತಿವೆ. ಜತೆಗೆ, ವಿದೇಶಗಳ ಹವಾಲಾ ಜಾಲಗಳ ಮೂಲಕವೂ ಹಣ ತೆಗೆದುಕೊಳ್ಳುತ್ತಿವೆ ಎಂಬುದು ಕೋಬ್ರಾಪೋಸ್ಟ್ ‘ಮಾರುವೇಷದ ಕಾರ್ಯಾಚರಣೆ’ಯಿಂದ ಬಹಿರಂಗವಾಗಿದೆ.
ಬೆಂಗಳೂರು, ದೆಹಲಿ, ನೊಯ್ಡಾ, ಘಾಜಿಯಾಬಾದ್, ಜೈಪುರ, ಲಖನೌ, ಮುಂಬೈ, ಕೋಲ್ಕತ್ತ, ಹೈದರಾಬಾದ್ ಹಾಗೂ ಕೊಚ್ಚಿಯಲ್ಲಿರುವ ಈ ಕಂಪೆನಿಗಳ ಕಚೇರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿವೆ.
೧೮ ತಿಂಗಳ ಕಾಲ ರಿಯಲ್ ಎಸ್ಟೇಟ್ ಕಂಪೆನಿಗಳನ್ನು ಕೋಬ್ರಾಪೋಸ್ಟ್ ರಹಸ್ಯವಾಗಿ ತನಿಖೆಗೆ ಒಳಪಡಿಸಿತ್ತು. ಈ ಅವಧಿಯಲ್ಲಿ ಕಂಪೆನಿಗಳ ಮುಖ್ಯಸ್ಥರು, ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳ ಸಂಭಾಷಣೆಗಳನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿತ್ತು.
ಅನಿವಾಸಿ ಭಾರತೀಯ ಗಣಿ ಉದ್ಯಮಿ ಹಾಗೂ ದಕ್ಷಿಣ ಭಾರತದ ರಾಜಕಾರಣಿಯ ಸೋಗಿನಲ್ಲಿ ಕೋಬ್ರಾಪೋಸ್ಟ್್ ವರದಿಗಾರೊಬ್ಬರು ಈ ಕಂಪೆನಿಗಳಿಗೆ ಭೇಟಿ ನೀಡಿದ್ದರು. ಈ ಕಂಪೆನಿಗಳ ಅಧಿಕಾರಿಗಳು ಆಸ್ತಿ ಖರೀದಿ ಮೊತ್ತದ ಶೇ೧೦ರಿಂದ ೯೦ರಷ್ಟು ಹಣವನ್ನು ಕಪ್ಪುಹಣದ ರೂಪದಲ್ಲೇ ಸ್ವೀಕರಿಸಲು ಸಿದ್ಧವಿರುವುದು ಕೂಡ ಕೋಬ್ರಾಪೋಸ್ಟ್ ನಡೆಸಿದ ‘ಆಪರೇಷನ್್ ಬ್ಲ್ಯಾಕ್ ನಿಂಜಾ’ದಿಂದ ಬಹಿರಂಗಗೊಂಡಿದೆ.
₨480 ಕೋಟಿ ಠೇವಣಿ ಇಡಲು ಆದೇಶ
ನವದೆಹಲಿ (ಐಎಎನ್ಎಸ್): ತನ್ನ ಸ್ಥಾನದ ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡದ ಒಟ್ಟು ₨630 ಕೋಟಿಯಲ್ಲಿ ₨480 ಕೋಟಿ ಮೊತ್ತವನ್ನು ಠೇವಣಿ ಇಡುವಂತೆ ಪ್ರಮುಖ ರಿಯಲ್ ಎಸ್ಟೇಟ್ ಕಂಪೆನಿ ಡಿಎಲ್ಎಫ್ಗೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ಜನವರಿ 15ರಿಂದ ₨75 ಕೋಟಿಯಂತೆ ಕಂತುಗಳಲ್ಲಿ ದಂಡವನ್ನು ಕಟ್ಟಿ ಮುಗಿಸುವಂತೆ ಡಿಎಲ್ಎಫ್ಗೆ ತಿಳಿಸಿದೆ. ಗುಡಗಾಂವ್ನಲ್ಲಿ ಮೂರು ಯೋಜನೆಗಳಲ್ಲಿ ತನ್ನ ಸ್ಥಾನದ ದುರ್ಬಳಕೆ ಮಾಡಿಕೊಂಡು ಗ್ರಾಹಕರಿಗೆ ವಂಚಿಸಿದ ಆರೋಪದಲ್ಲಿ ಭಾರತೀಯ ಸ್ಪರ್ಧಾ ಆಯೋಗ ಡಿಎಲ್ಎಫ್ಗೆ ₨630 ಕೋಟಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಡಿಎಲ್ಎಫ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.