ನವದೆಹಲಿ: ಹತ್ತನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳ ಮರುಪರೀಕ್ಷೆ ನಡೆಸುವುದಾಗಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ(ಸಿಬಿಎಸ್ಇ) ಬುಧವಾರ ಪ್ರಕಟಿಸಿದೆ.
ಗಣಿತ, ಅರ್ಥಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ವರದಿಗಳ ಬೆನ್ನಲೇ ಸಿಬಿಎಸ್ಇ ಮರುಪರೀಕ್ಷೆಯ ನಿರ್ಧಾರ ಪ್ರಕಟಿಸಿದ್ದು, ಒಂದು ವಾರದೊಳಗೆ ಸಿಬಿಎಸ್ಇ ಅಧಿಕೃತ ವೆಬ್ಸೈಟ್ನಲ್ಲಿ ಪರೀಕ್ಷೆ ದಿನಾಂಕ ತಿಳಿಸುವುದಾಗಿ ಹೇಳಿದೆ.
ಸಾಮಾಜಿಕ ಮಾಧ್ಯಮಗಳು ಹಾಗೂ ವಾಟ್ಸ್ಆ್ಯಪ್ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ಕುರಿತ ವರದಿಗಳನ್ನು ಸೋಮವಾರ ಸಿಬಿಎಸ್ಇ ಅಲ್ಲಗಳೆದಿತ್ತು.
ಕೆಲವು ಪರೀಕ್ಷೆಗಳ ವೇಳೆ ನಡೆದಿರುವ ಸಂಗತಿಗಳನ್ನು ಪರಿಗಣಿಸಿರುವ ಮಂಡಳಿ, ವಿದ್ಯಾರ್ಥಿಗಳ ಹಿತಾಸಕ್ತಿ ಹಾಗೂ ಬೋರ್ಡ್ ಎಕ್ಸಾಮ್ನ ಘನತೆಗೆ ಧಕ್ಕೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಬಿಎಸ್ಇ ಪ್ರಕಟಣೆಯಲ್ಲಿ ತಿಳಿಸಿದೆ.
ಬುಧವಾರ 10ನೇ ತರಗತಿಯ ಗಣಿತ ಪರೀಕ್ಷೆ ಹಾಗೂ ಮಾ.26ರಂದು 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ನಡೆದಿತ್ತು.