ನವದೆಹಲಿ (ಪಿಟಿಐ): ‘ಮನೆಗೆಲಸದವಳ ವೀಸಾ ಉಲ್ಲಂಘನೆ ಆರೋಪದಲ್ಲಿ ಅಮೆರಿಕದ ಅಧಿಕಾರಿಗಳು ಕೈಕೋಳ ತೊಡಿಸಿ ಬಂಧಿಸಿದಾಗ ಹಾಗೂ ವಿವಸ್ತ್ರಗೊಳಿಸಿ ಒಳಾಂಗಗಳನ್ನು ತಪಾಸಣೆ ಮಾಡಿದಾಗ ದುಃಖದಿಂದ ಕುಸಿದುಹೋಗಿದ್ದೆ’ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಹೇಳಿಕೊಂಡಿದ್ದಾರೆ.
‘ರಾಜತಾಂತ್ರಿಕ ರಕ್ಷಣೆ ಇದ್ದರೂ ನನ್ನನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ವ್ಯಸನಿಗಳ ಜತೆ ಕೂಡಿಟ್ಟಿದ್ದರು. ಕೈಕೋಳ ತೊಡಿಸಿದಾಗ, ವಿವಸ್ತ್ರಗೊಳಿಸಿ ತಪಾಸಣೆ ಮಾಡಿದಾಗ ನಾನು ಅನೇಕ ಸಲ ಕುಸಿದಿದ್ದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಕಳಿಸಿದ ಇ–ಮೇಲ್ನಲ್ಲಿ ಖೋಬ್ರಾಗಡೆ ತಿಳಿಸಿದ್ದಾರೆ.
‘ಇಷ್ಟಾದರೂ ನಾನು ವಿಚಲಿತಳಾಗಲಿಲ್ಲ. ನನ್ನೆಲ್ಲ ಸಹೋದ್ಯೋಗಿಗಳು ಹಾಗೂ ನನ್ನ ದೇಶವನ್ನು ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಪ್ರತಿನಿಧಿಸಬೇಕು ಎಂಬ ಭಾವನೆಯಲ್ಲಿ ಸಮಾಧಾನಚಿತ್ತಳಾಗಿಯೇ ಇದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.