ಬೆಂಗಳೂರು: ‘ಬರಪೀಡಿತ ತಾಲ್ಲೂಕುಗಳ ಫಲಾನುಭವಿಗಳಿಗೆ ಹಣದ ಬದಲು 10 ಕೆ.ಜಿ. ಅಕ್ಕಿ ನೀಡಲಾಗುವುದು’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುತ್ತಿದ್ದಂತೆ, ಆ ತಾಲ್ಲೂಕುಗಳಲ್ಲಿ 10 ಕೆ.ಜಿ. ಅಕ್ಕಿ ಪೂರೈಕೆ ಮಾಡುತ್ತೇವೆ’ ಎಂದರು.
‘ಪಡಿತರಚೀಟಿದಾರರಿಗೆ 10 ಕೆ.ಜಿ. ಅಕ್ಕಿ ಪೂರೈಸುವ ಬಗ್ಗೆ ವಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಛತ್ತೀಸಗಢ ಸರ್ಕಾರಗಳು ಅಕ್ಕಿ ಕೊಡಲು ಮುಂದೆ ಬಂದಿವೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬೆಲೆ ನಿಗದಿ ವಿಚಾರವಾಗಿ ಮಾತುಕತೆ ನಡೆಯುತ್ತಿದೆ’ ಎಂದು ಹೇಳಿದರು.
‘ಜುಲೈ ತಿಂಗಳಿನಲ್ಲಿ 97 ಲಕ್ಷ ಕಾರ್ಡ್‌ದಾರರಿಗೆ ಡಿಬಿಟಿ (ನೇರ ನಗದು ವರ್ಗಾವಣೆ) ಮಾಡಿದ್ದೇವೆ. ಆಗಸ್ಟ್ ತಿಂಗಳಲ್ಲಿ 3.69 ಕೋಟಿ ಜನರಿಗೆ ₹ 606 ಕೋಟಿ ಬಿಡುಗಡೆ ಮಾಡಿದ್ದೇವೆ. 21 ಲಕ್ಷ ಜನರಿಗೆ ಬ್ಯಾಂಕ್ ಖಾತೆ ಇಲ್ಲ. ಎರಡು ಲಕ್ಷ ಜನರಿಗೆ ನಾವೇ ಬ್ಯಾಂಕ್ ಖಾತೆ ಮಾಡಿದ್ದೇವೆ. 14 ಲಕ್ಷ ಜನರಿಗೆ ಬ್ಯಾಂಕ್ ಖಾತೆ ಮಾಡಿಸುತ್ತಿದ್ದೇವೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.