ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಘನತೆಗೆ ಧಕ್ಕೆ ತರುವ ವಿವಸ್ತ್ರ ಪ್ರಕರಣ 2022ರಲ್ಲಿ 1,328! NCRB ವರದಿ

ಮಹಿಳೆಯ ಘನತೆಗೆ ಧಕ್ಕೆ ತರುವ ಯತ್ನ: 2022ರ ಎನ್‌ಸಿಆರ್‌ಬಿ ವರದಿ ಮಾಹಿತಿ
Published 12 ಡಿಸೆಂಬರ್ 2023, 20:19 IST
Last Updated 12 ಡಿಸೆಂಬರ್ 2023, 20:19 IST
ಅಕ್ಷರ ಗಾತ್ರ

ಕುಕಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ರಸ್ತೆಗಳಲ್ಲಿ ಮೆರವಣಿಗೆ ಮಾಡಿಸಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಯು ಮಣಿಪುರದಲ್ಲಿ ಇದೇ ವರ್ಷ ನಡೆದಿತ್ತು. ಈಗ ಕರ್ನಾಟಕದಲ್ಲಿ ಇದೇ ರೀತಿಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿ ಥಳಿಸಿದ ಕೃತ್ಯ ಭಾನುವಾರ ನಡೆದಿದೆ. ಈ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ವಿರುದ್ಧ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ ಇಂತಹ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಅವುಗಳಲ್ಲಿ ಬಹುತೇಕವು ಸುದ್ದಿಯಾಗುತ್ತಲೇ ಇಲ್ಲ.

–––

ಬೆಂಗಳೂರು: ಗೌರವಕ್ಕೆ ಧಕ್ಕೆ ತರಬೇಕು ಎಂಬ ಉದ್ದೇಶದಿಂದಲೇ ಸಾರ್ವಜನಿಕವಾಗಿ ಮಹಿಳೆಯನ್ನು ಬೆತ್ತಲುಗೊಳಿಸುವ ಪ್ರಕರಣಗಳು ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇವೆ. 2022ರಲ್ಲಿ ರಾಜ್ಯದಾದ್ಯಂತ ಇಂಥ ಒಟ್ಟು 1,328 ಪ್ರಕರಣಗಳು ದಾಖಲಾಗಿದ್ದವು. ದೇಶದಲ್ಲಿ ಇಂತಹ ಅತಿಹೆಚ್ಚು ಪ್ರಕರಣಗಳು ದಾಖಲಾದ ಮೂರನೇ ರಾಜ್ಯ ಕರ್ನಾಟಕ.

ರಾಜ್ಯ ಪೊಲೀಸ್‌ ಇಲಾಖೆಯು ನೀಡಿದ ದತ್ತಾಂಶಗಳ ಆಧಾರದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಸಿದ್ಧಪಡಿಸಿರುವ ‘ಭಾರತದಲ್ಲಿ ಅಪರಾಧ–2022’ ವರದಿಯಲ್ಲಿ ಈ ಮಾಹಿತಿ ಇದೆ. ಪ್ರತಿ ವರ್ಷ ಇಂತಹ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವಂತೆಯೇ, ಸಂತ್ರಸ್ತೆಯರ ಸಂಖ್ಯೆಯೂ ಏರಿಕೆಯಾಗುತ್ತಿದೆ. 2018ರಲ್ಲಿ ರಾಜ್ಯದಲ್ಲಿ ಒಟ್ಟು 1,014 ಮಹಿಳೆಯರು ಇಂತಹ ಕೃತ್ಯಗಳ ಸಂತ್ರಸ್ತೆಯರಾಗಿದ್ದರು. 2022ರಲ್ಲಿ ಸಂತ್ರಸ್ತ ಮಹಿಳೆಯರ ಸಂಖ್ಯೆ 1,573ಕ್ಕೆ ಏರಿಕೆಯಾಗಿದೆ. 

ಇಂಥ ಕೃತ್ಯಗಳು ಐಪಿಸಿ ಸೆಕ್ಷನ್‌ನ 354ಬಿ ಅಡಿಯಲ್ಲಿ ಬರುತ್ತವೆ. ಕಳೆದ ಐದು ವರ್ಷಗಳ ಎನ್‌ಸಿಆರ್‌ಬಿ ವರದಿಯನ್ನು ಗಮನಿಸಿದಾಗ ರಾಜ್ಯದಲ್ಲಿ ಇಂತಹ ಕೃತ್ಯಗಳ ಏರಿಕೆಯು ಗಾಬರಿ ಹುಟ್ಟಿಸುವಂತಿದೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಅವಮಾನಿಸಿದ 983 ಪ್ರಕರಣವು 2018ರಲ್ಲಿ ದಾಖಲಾಗಿತ್ತು. ಆ ವರ್ಷ ರಾಜ್ಯವು ಇತರ ರಾಜ್ಯಗಳ ಹೋಲಿಕೆಯಲ್ಲಿ ಮೂರನೇ ಸ್ಥಾನದಲ್ಲಿತ್ತು. 2019ರಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದರೂ ಸಂತ್ರಸ್ತೆಯರ ಸಂಖ್ಯೆಯು ಏರುಗತಿಯಲ್ಲಿಯೇ ಇತ್ತು.

ಇದೇ ಸೆಕ್ಷನ್‌ ಅಡಿಯಲ್ಲಿ 2020ರಲ್ಲಿ 903 ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದವು. ಈ ಸಂಖ್ಯೆಯು 2021ರ ಹೊತ್ತಿಗೆ ತೀವ್ರ ಏರಿಕೆ ಕಂಡಿತು. ನಂತರದ ಎರಡೂ ವರ್ಷಗಳಲ್ಲಿ ಇಂತಹ ಪ್ರಕಣಗಳು ಏರಿಕೆಯಾಗುತ್ತಲೇ ಇವೆ. ಇಷ್ಟೊಂದು ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದರೂ ಪ್ರಕರಣಗಳ ತನಿಖೆ ಹಾಗೂ ವಿಚಾರಣೆ ಯಾವ ಹಂತದಲ್ಲಿವೆ ಎನ್ನುವ ರಾಜ್ಯವಾರು ಮಾಹಿತಿಯು ಈ ವರದಿಯಲ್ಲಿ ಲಭ್ಯವಿಲ್ಲ. ಆದ್ದರಿಂದ, ರಾಜ್ಯದಲ್ಲಿ ದಾಖಲಾದ ಪ್ರಕರಣಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT