ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವರ್ಷದಲ್ಲಿ 178 ಮಂದಿ ಅಂಗಾಂಗ ದಾನ: ದಿನೇಶ್‌ ಗುಂಡೂರಾವ್

Published 1 ಮಾರ್ಚ್ 2024, 15:23 IST
Last Updated 1 ಮಾರ್ಚ್ 2024, 15:23 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವರ್ಷದಲ್ಲಿ 178 ಮಂದಿಯ ಅಂಗಾಂಗ ದಾನ ಪಡೆಯಲಾಗಿದೆ. ದಾನದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದಾನದ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಮುಖ್ಯಮಂತ್ರಿಯವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಗಾಂಗ ದಾನಿಗಳ ಕುಟುಂಬದ ಸದಸ್ಯರಿಗೆ ಪ್ರಶಂಸಾ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗಾಂಗ ಪಡೆಯಲು ಎಂಟು ಸಾವಿರಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಒಂದು ವರ್ಷದಲ್ಲಿ ದಾನ ಮಾಡಿದವರ ಸಂಖ್ಯೆ ಅತ್ಯಂತ ಕಡಿಮೆ. ದಾನ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಒಬ್ಬ ವ್ಯಕ್ತಿ ಅಂಗಾಂಗ ದಾನದ ಮೂಲಕ ಎಂಟು ಜನರಿಗೆ ಜೀವದಾನ ಮಾಡಬಹುದು ಎಂದರು.  

ದಾನಿಗಳ ಕುಟುಂಬದ ಸದಸ್ಯರಿಗೆ ಪ್ರಶಂಸಾ ಪತ್ರ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂಗಾಂಗ ದಾನದ ನಿರ್ಧಾರ ಸುಲಭವಲ್ಲ. ಇತರರ ಜೀವ ಉಳಿಸುವ ಕೆಲಸ ಶ್ರೇಷ್ಠವಾದುದು. ಅದಕ್ಕಾಗಿ ಹಿಂದಿನ ಅವಧಿಯಲ್ಲಿ ದಾನಕ್ಕಾಗಿಯೇ ಸಂಸ್ಥೆ ಸ್ಥಾಪಿಸಲಾಗಿತ್ತು. ದಾನಿಗಳ ಕುಟುಂಬದ ಜತೆ ಸರ್ಕಾರ ಸದಾ ಇರುತ್ತದೆ. ಯಾವುದೇ ಸಂಕಷ್ಟ ಎದುರಾದರೂ ನೆರವಿಗೆ ಬರುತ್ತದೆ ಎಂದು ಭರವಸೆ ನೀಡಿದರು.

ಅಪಘಾತಕ್ಕೀಡಾದ ಶರವಣ ಅವರ ಪತ್ನಿ, ಪ್ರಶಂಸಾ ಪತ್ರ ಸ್ವೀಕರಿಸುವಾಗ ಅಗಲಿದ ತಮ್ಮ ಪತಿ ನೆನಪು ಮಾಡಿಕೊಂಡು ಕಣ್ಣೀರಾದರು. ಅವರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, ಕೊಲೆಯಾಗಿದ್ದ ರಾಮನಗರದ ಕೆ.ಜಿ. ನವೀನ್‌ ಕುಟುಂಬದ ಸದಸ್ಯರಿಗೆ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌, ಆಯುಕ್ತ ಡಿ.ರಂದೀಪ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT