ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

276 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ

ಒಂದೇ ಶಿಕ್ಷಣ ಸಂಸ್ಥೆಯಲ್ಲಿ 1ರಿಂದ 12ನೇ ತರಗತಿವರೆಗೆ ವಿದ್ಯಾಭ್ಯಾಸ
Last Updated 3 ಜನವರಿ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಡೆಯಲು ಮತ್ತುಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಸರ್ಕಾರವು 276 ಪದವಿ ಪೂರ್ವ ಕಾಲೇಜುಗಳನ್ನು ‘ಕರ್ನಾಟಕ ಪಬ್ಲಿಕ್‌ ಶಾಲೆ’ಗಳಾಗಿ ಮಾರ್ಪಡಿಸಲು ಮುಂದಾಗಿದೆ.

ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಇಳಿಮುಖವಾಗುತ್ತಿದೆ. ಇದನ್ನು ತಪ್ಪಿಸಲು ಒಂದನೇ ತರಗತಿಯಿಂದ ಪದವಿಪೂರ್ವ ಹಂತದ ವರೆಗೂ ಒಂದೇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಲಿಕೆಗೆ ಅನುವು ಮಾಡಿಕೊಡಲುಕರ್ನಾಟಕ ಪಬ್ಲಿಕ್‌ ಶಾಲೆ (ಕೆ.ಪಿ.ಎಸ್‌.) ಯೋಜನೆ ರೂಪಗೊಂಡಿದೆ.

2018–19ನೇ ಸಾಲಿನಲ್ಲಿ 176 ಕೆ.ಪಿ.ಎಸ್‌.ಗಳನ್ನು ಪ್ರಾಯೋಗಿಕವಾಗಿ ತೆರೆಯಲಾಗಿತ್ತು. ಆದರೆ, ಮೂಲಸೌಕರ್ಯ ಹಾಗೂ ಬೋಧನಾ ಕ್ರಮಗಳನ್ನು ನಿರ್ದಿಷ್ಟ ಪಡಿಸಿರಲಿಲ್ಲ. ಅಲ್ಲದೇ, ಶಾಲೆಗಳ ಉದ್ದಾರಕ್ಕೆ ವಿಶೇಷ ಅನುದಾನವನ್ನೂ ನೀಡಿರಲಿಲ್ಲ. ಈ ವರ್ಷ 100 ಅನ್ನು ಹೊಸದಾಗಿ ಸೇರಿಸಿ 276 ಶಾಲೆಗಳಿಗೂ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ಇಲಾಖೆ ಹೊರಡಿಸಿದೆ.

ಕೆ.ಪಿ.ಎಸ್‌.ಗಳಲ್ಲಿ ಕಲಿಯುವ ಶೇ 75ರಷ್ಟು ವಿದ್ಯಾರ್ಥಿಗಳು ಶೇ 75ಕ್ಕಿಂತ ಹೆಚ್ಚಿನ ಕಲಿಕಾ ಸಾಧನೆ ಮಾಡಬೇಕು. ಉಳಿದ ವಿದ್ಯಾರ್ಥಿಗಳು ಕನಿಷ್ಠ ಶೇ 50ರಿಂದ ಶೇ 74ರ ವರೆಗೆ ಫಲಿತಾಂಶ ಸಾಧಿಸಬೇಕು ಎಂದು ಇಲಾಖೆ ಗುರಿ ನಿಗದಿ ಪಡಿಸಿದೆ.

ಪ್ರತಿ ಪಬ್ಲಿಕ್ ಶಾಲೆಯ ನಿರ್ವಹಣೆಗಾಗಿ ವಾರ್ಷಿಕ ₹ 5 ಲಕ್ಷ ಹಾಗೂ ಪ್ರತಿ ತರಗತಿ ಕೊಠಡಿಯ ದುರಸ್ಥಿಗೆ ₹ 1 ಲಕ್ಷ ಅನುದಾನ ನೀಡಲು ನಿರ್ಧರಿಸಲಾಗಿದೆ.

ಹಿರಿಯ ಉಪನ್ಯಾಸಕರೊಬ್ಬರನ್ನು ಪ್ರತಿ ಶಾಲೆಗೆ ನೋಡಲ್‌ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತಿದೆ. ಆ ಅಧಿಕಾರಿಯು ತಿಂಗಳಲ್ಲಿ ಕನಿಷ್ಠ 2 ಬಾರಿ ಕೆ.ಪಿ.ಎಸ್‌.ಗೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.

ಹಿನ್ನಲೆ: ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಹಂತಗಳಿವೆ. ಪ್ರತಿ ಹಂತವನ್ನು ಪೂರೈಸಿ, ಮುಂದಿನ ಹಂತಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿತ್ತು.

ಒಂದೇ ಸೂರಿನಡಿ ಪಿ.ಯು ಹಂತದವರೆಗೆ ಶಿಕ್ಷಣ ನೀಡಿದರೆ, ಶಾಲೆಯ ಮೂಲಸೌಕರ್ಯದ ಅಭಿವೃದ್ಧಿ, ಶಿಕ್ಷಕರ ಬೋಧನಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಕರ್ನಾಟಕ ಜ್ಞಾನ ಆಯೋಗವು ಶಿಫಾರಸು ಮಾಡಿತ್ತು.

ಶಾಲಾ ವಿಶೇಷತೆ

*ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದ ಕಲಿಕೆ

*ಆಕರ್ಷಕ ವಿನ್ಯಾಸದ ಶಾಲಾ ಕಟ್ಟಡ

* ಪ್ರಯೋಗಾಲಯ, ಗ್ರಂಥಾಲಯ

*ಇಂಟರ್‌ನೆಟ್‌ ಸಂಪರ್ಕ

*ಸಿ.ಸಿ ಟಿ.ವಿ. ಅಳವಡಿಕೆ

* ರಾಷ್ಟ್ರೀಯ ವಿದ್ಯಾರ್ಥಿ ವೇತನದ ಪರೀಕ್ಷೆಗಳನ್ನು ಎದುರಿಸಲು ವಿಶೇಷ ತರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT