ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಜಲಶಕ್ತಿ ಅಭಿಯಾನ’ದಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಕಲಬುರಗಿ ಪ್ರಥಮ, ದಾವಣಗೆರೆ ಕೊನೆ; 15 ಸಾವಿರ ಕೆರೆಗಳ ಪುನರುಜ್ಜೀವನ
Published : 14 ಮಾರ್ಚ್ 2023, 20:29 IST
ಫಾಲೋ ಮಾಡಿ
Comments

ಬೆಂಗಳೂರು: ಕೇಂದ್ರಸರ್ಕಾರದ ‘ಜಲಶಕ್ತಿ ಅಭಿಯಾನ: ಕ್ಯಾಚ್‌ ದ ರೈನ್‌– 2022’ರಲ್ಲಿ ರಾಜ್ಯ ಎರಡನೇ ಸ್ಥಾನ ಗಳಿಸಿದೆ. ಮಾರ್ಚ್‌ 14ಕ್ಕೆ ಅಭಿಯಾನ ಅಂತ್ಯವಾಗಿದ್ದು, ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ‘ಎಲ್ಲಿ, ಯಾವಾಗ ಮಳೆಯಾಗುತ್ತದೋ, ಅಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು’ ಎಂಬ ಘೋಷವಾಕ್ಯದೊಂದಿಗೆ 2022ರ ಮಾ.29ರಂದು ‘ಜಲಶಕ್ತಿ ಅಭಿಯಾನ’ ಆರಂಭವಾಗಿತ್ತು. ಪೂರ್ವ ಮುಂಗಾರು ಹಾಗೂ ಮುಂಗಾರು ಅವಧಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿತ್ತು.

ನೀರಿನ ಸಂರಕ್ಷಣೆ, ಮಳೆ ನೀರು ಸಂಗ್ರಹ, ಛಾವಣಿ ನೀರು ಸಂಗ್ರಹಕ್ಕೆ ಕಟ್ಟಡಗಳಲ್ಲಿ ಸೌಲಭ್ಯ ಕಲ್ಪಿಸುವುದು, ನೀರು ಸಂಗ್ರಹದ ಹೊಂಡಗಳು, ಹೊಸ ಚೆಕ್‌ ಡ್ಯಾಂ ನಿರ್ಮಾಣ, ಸಾಂಪ್ರದಾಯಿಕ ನೀರು ಸಂಗ್ರಹದ ವ್ಯವಸ್ಥೆಗಳಾದ ಬಾವಿ, ಕೆರೆಗಳ ಪುನರುಜ್ಜೀವನ, ಜಲಾನಯನ, ಕೊಳವೆಬಾವಿಗಳು ಮರುಬಳಕೆ–ಮರುಪೂರಣ, ಸಣ್ಣ ನದಿಗಳ ಪುನಶ್ಚೇತನ, ಪ್ರವಾಹ–ದಂಡೆಗಳ ಬಲವರ್ಧನೆಯಲ್ಲಿ 4 ಲಕ್ಷಕ್ಕೂ ಅಧಿಕ ಕಾಮಗಾರಿಗಳನ್ನು ರಾಜ್ಯದಲ್ಲಿ ನಡೆಸಲಾಗಿದೆ.

ಜಲಮೂಲಗಳ ಜಿಯೊ–ಟ್ಯಾಗಿಂಗ್‌ ಕೂಡ ಮಾಡಲಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ನೀರಿಗೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡುವ ‘ಜಲಶಕ್ತಿ ಕೇಂದ್ರ’ಗಳನ್ನೂ ಸ್ಥಾಪಿಸಲಾಗಿದೆ. ಈ ಅಭಿಯಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ‘ಅನುಷ್ಠಾನ ಇಲಾಖೆ’ಯಾಗಿ ಕಾರ್ಯನಿರ್ವಹಿಸಿತ್ತು.

‘ಜಲಶಕ್ತಿ ಅಭಿಯಾನದ’ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದ ಜಿಲ್ಲೆಗಳ ಪೈಕಿ ಕಲಬುರಗಿ ಮೊದಲ ಸ್ಥಾನದಲ್ಲಿದೆ. ಒಟ್ಟು ಕಾಮಗಾರಿಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜಲಾನಯನ ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಯಲ್ಲಿ ನಿರ್ವಹಿಸಲಾಗಿದೆ. ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ರಾಮನಗರ ಮತ್ತು ಬೆಳಗಾವಿಯಲ್ಲಿ ನೀರಿನ ಮರುಬಳಕೆಯಲ್ಲಿ ತಲಾ 17 ಸಾವಿರ ಕಾಮಗಾರಿ ನಡೆಸಲಾಗಿದೆ.

ಉಡುಪಿ, ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಕಡಿಮೆ ಕಾಮಗಾರಿಗಳು ನಡೆದಿದ್ದು, ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ.

18 ಸಾವಿರ ಚೆಕ್‌ ಡ್ಯಾಂ: ರಾಜ್ಯ ದಲ್ಲಿ 18 ಸಾವಿರ ಚೆಕ್‌ಡ್ಯಾಂ, 55 ಸಾವಿರ ಹೊಂಡ, ಕೊಳ, ಕಲ್ಯಾಣಿ, ಗೋಕಟ್ಟೆಗಳನ್ನು ಪುನರುಜ್ಜೀವನ ಗೊಳಿಸಲಾಗಿದೆ. 15 ಸಾವಿರ ಕೆರೆಗಳನ್ನು ಹೂಳು ತೆಗೆದು ಮರು ಅಭಿವೃದ್ಧಿ ಮಾಡಲಾಗಿದೆ. ನರ್ಸರಿಯಲ್ಲಿ ಸಸಿಗಳನ್ನು ಬೆಳೆಸುವುದು ಹಾಗೂ ಅರಣ್ಯದಲ್ಲಿ ಗಿಡ ನೆಡುವುದು ಸೇರಿದಂತೆ ಅರಣ್ಯೀಕರಣದಲ್ಲಿ 3 ಕೋಟಿಗೂ ಹೆಚ್ಚು ಸಸಿಗಳನ್ನು ಪೋಷಿಸಲಾಗಿದೆ. ನೀರಿನ ಬಳಕೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು 26 ಸಾವಿರ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಸತತ ಉತ್ತಮ ಕಾರ್ಯ: ಅತೀಕ್‌
ಜಲಮೂಲಗಳ ಅಭಿವೃದ್ಧಿ ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳಲ್ಲಿ ರಾಜ್ಯ ಸತತವಾಗಿ ಉತ್ತಮ ಕಾರ್ಯ ಮಾಡಿದೆ. ಪ್ರಸ್ತುತ, ‘ಜಲಶಕ್ತಿ ಅಭಿಯಾನ’ದ ಅನುಷ್ಠಾನದಲ್ಲಿ ದೇಶಕ್ಕೇ 2ನೇ ಸ್ಥಾನ ಪಡೆದಿದ್ದೇವೆ. ಈ ಅಭಿಯಾನದಲ್ಲಿ 4 ಲಕ್ಷಕ್ಕೂ ಹೆಚ್ಚು ಕಾಮಗಾರಿಗಳನ್ನು ನಾವು ಎಂ–ನರೇಗಾ ಹಾಗೂ ಇತರೆ ಯೋಜನೆಗಳಲ್ಲಿ ಪೂರ್ಣಗೊಳಿಸಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT