ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಆ್ಯಪ್‌ ವಂಚನೆ: ಪತ್ತೆಯಾಗದ ಶೇ 36ರಷ್ಟು ಪ್ರಕರಣ

ಪ್ರಜ್ವಲ್ ಡಿಸೋಜಾ
Published 28 ಏಪ್ರಿಲ್ 2024, 23:08 IST
Last Updated 28 ಏಪ್ರಿಲ್ 2024, 23:08 IST
ಅಕ್ಷರ ಗಾತ್ರ

ಬೆಂಗಳೂರು: ಸಾಲದ ಆ್ಯಪ್‌ಗಳ ವಂಚನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳಲ್ಲಿ ಪೈಕಿ ಶೇ 36ರಷ್ಟರಲ್ಲಿ ಆರೋಪಿಗಳ ಪತ್ತೆಗೆ ಸಾಕ್ಷ್ಯಗಳ ಕೊರತೆ ಉಂಟಾಗಿದ್ದು, ಪ್ರಕರಣಗಳನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿದೆ.

ಆನ್‌ಲೈನ್ ಮೂಲಕ ಸಾಲ ನೀಡುವ ಆ್ಯಪ್‌ ಕಂಪನಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಅಂಕಿ–ಅಂಶವನ್ನು ಪೊಲೀಸರು ಸಿದ್ಧಪಡಿಸಿದ್ದಾರೆ.

‘2020ರಿಂದ 2023ರವರೆಗೆ ಒಟ್ಟು 1,011 ಪ್ರಕರಣಗಳು ದಾಖಲಾಗಿವೆ. ಈ ಪೈಕಿ, 372 ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗಿಲ್ಲ. 84 ಪ್ರಕರಣಗಳಲ್ಲಿ ಕೃತ್ಯದ ಪುರಾವೆಗಳು ಲಭ್ಯ ಇಲ್ಲವೆಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಉಳಿದಂತೆ 422 ಪ್ರಕರಣಗಳ ಮರು ವಿಚಾರಣೆಗೆ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ. 19 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಉಳಿದ 114 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

ಹೊರ ದೇಶಗಳ ಸರ್ವರ್: ‘ಬಹುತೇಕ ಆ್ಯಪ್‌ಗಳ ನಿರ್ವಹಣೆಯನ್ನು ಹೊರ ದೇಶದ ಪ್ರಜೆಗಳು ನಿರ್ವಹಿಸುತ್ತಿದ್ದಾರೆ. ತಮ್ಮದೇ ಸರ್ವರ್‌ಗಳನ್ನು ಬಳಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಲು ಅವರು ಯಾವುದೇ ಮಾಹಿತಿ ನೀಡುತ್ತಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಆಮಿಷವೊಡ್ಡಿ ಆ್ಯಪ್‌ನವರು ಸಾಲ ಕೊಡುತ್ತಿದ್ದು, ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಮರುಪಾವತಿ ಮಾಡದಿದ್ದರೆ, ಖಾಸಗಿ ಫೋಟೊ, ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಇದರಿಂದ ನೊಂದ ಹಲವರು ಠಾಣೆಗೆ ದೂರು ನೀಡಿದ್ದಾರೆ. ಅಂತರರಾಷ್ಟ್ರೀಯ ನಿಯಮಗಳಿಂದಾಗಿ ಆರೋಪಿಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ’ ಎಂದರು.

ಬ್ಯಾಂಕ್‌ಗಳ ಜೊತೆ ಸಭೆ: ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಸಾಲದ ಆ್ಯಪ್‌ಗಳಿಗೆ ಕಡಿವಾಣ ಹಾಕಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಜೊತೆ ಪ್ರತಿ ತಿಂಗಳು ಸಭೆ ನಡೆಸುತ್ತಿರುವ ಅವರು, ಆ್ಯಪ್‌ ಕಂಪನಿಗಳ ಖಾತೆಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸುತ್ತಿದ್ದಾರೆ. ಅನುಮಾನಾಸ್ಪದ ವಹಿವಾಟುಗಳು ಕಂಡುಬಂದರೆ, ಮಾಹಿತಿ ನೀಡುವಂತೆಯೂ ತಿಳಿಸಿರುವುದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT