ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ತಲೆತಗ್ಗಿಸುವ ರೀತಿ ವ್ಯವಸ್ಥೆ ಇದೆ

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ತಲೆ ತಗ್ಗಿಸಬೇಕಾದ ರೀತಿ ಸರ್ಕಾರಿ ವ್ಯವಸ್ಥೆ ಇದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನ ಪರಿಷತ್ತಿನಲ್ಲಿ ಬುಧವಾರ ಬೇಸರ ತೋಡಿಕೊಂಡರು.

‘ಬಗರ್‌ಹುಕುಂ ಅರ್ಜಿ ವಿಲೇವಾರಿ ಸಮಿತಿ ವಾರಕ್ಕೊಮ್ಮೆಯಾದರೂ ಸಭೆ ನಡೆಸಬೇಕು. ಸಭೆ ನಡೆಸಲು ಇಬ್ಬರು ಅರ್ಜಿದಾರರು ಹಾಜರಿದ್ದರೂ ಸಾಕು. ಅರ್ಜಿ ವಿಲೇವಾರಿ ಬಗ್ಗೆ ಎರಡೇ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಎಲ್ಲ ತಹಶೀಲ್ದಾರ್‌ಗಳಿಗೆ ಸುತ್ತೋಲೆ ಕಳುಹಿಸಿದ್ದೇವೆ. ಆದರೂ ವಿಳಂಬವಾಗುತ್ತಿದೆ’ ಎಂದರು.

‘ಸಭೆ ನಡೆಸದಂತೆ ಕೆಲವು ಕಡೆ ಶಾಸಕರೇ ಒತ್ತಡ ತರುತ್ತಿದ್ದಾರೆ. ಈ ಬಗ್ಗೆ ಅನೇಕ ತಹಶೀಲ್ದಾರ್‌ಗಳೇ ನನ್ನ ಬಳಿ ನೋವು ತೋಡಿಕೊಂಡಿದ್ದಾರೆ’ ಎಂದು ಅವರು ತಿಳಿಸಿದರು.

‘ಈ ಕೆಲಸ ಮಾಡಿಕೊಡಿ. ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಶಾಸಕರನ್ನು ಕೇಳಿಕೊಂಡಿದ್ದೇನೆ’ ಎಂದರು.

‘ಬಗರ್‌ಹುಕುಂ ಸಾಗುವಳಿದಾರರು ಕಮಿಷನ್‌ ಕೊಡುವುದಿಲ್ಲ. ಹಾಗಾಗಿ ಶಾಸಕರು ಸಭೆ ಕರೆಯುವುದಿಲ್ಲ. ಅರ್ಜಿದಾರರಿಗೆ ಅವರ ಜಮೀನಿನ ಹಕ್ಕು ಸಿಗುವುದಿಲ್ಲ. ಹಕ್ಕು ಪತ್ರ ಕೊಡಲು ಸಾಧ್ಯವಿಲ್ಲ’ ಎಂದು ಸರ್ಕಾರ ನೇರವಾಗಿ ಹೇಳಿಬಿಡಲಿ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಖಾರವಾಗಿ ಹೇಳಿದರು.

‘ಈ ರೀತಿ ಹೇಳಬಾರದು. ನನ್ನ ಸಂಕಟ ಹೇಳಿಕೊಂಡಿದ್ದೇನೆ ಅಷ್ಟೇ. ಪರಿಸ್ಥಿತಿಯನ್ನು ನೀವೂ ಅರ್ಥಮಾಡಿಕೊಳ್ಳಬೇಕು’ ಎಂದು ಸಚಿವರು ಹೇಳಿದರು.

ಈ ಸಮಿತಿಗಳಲ್ಲಿ ವಿಧಾನ ಪರಿಷತ್‌ ಸದಸ್ಯರಿಗೆ ಪ್ರಾತಿನಿಧ್ಯವಿಲ್ಲ. ಸಮಿತಿಯ ಸಹ ಅಧ್ಯಕ್ಷರನ್ನಾಗಿ ಪರಿಷತ್‌ ಸದಸ್ಯರನ್ನು ನೇಮಿಸಬೇಕು ಎಂದು ಜೆಡಿಎಸ್‌ನ ರಮೇಶ್‌ಬಾಬು ಸಲಹೆ ನೀಡಿದರು.

’ಇದಕ್ಕೆ ನನ್ನ ಅಭ್ಯಂತರ ಇಲ್ಲ. ಆದರೆ, ವಿಧಾನಸಭಾ ಕ್ಷೇತ್ರವಾರು ಸಮಿತಿಗಳನ್ನು ರಚಿಸಲಾಗಿದೆ. ಕಾನೂನು ತಿದ್ದುಪಡಿ ತರದೇ ಇದನ್ನು ಮಾಡಲು ಸಾಧ್ಯವಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಬೆಂಬಲ ಬೆಲೆಯಲ್ಲಿ ಕಡಲೆ ಕಾಳು ಖರೀದಿ: ಷರತ್ತು ಸಡಿಲಿಸಲು ಆಗ್ರಹ

ಬೆಂಗಳೂರು: ಬೆಂಬಲ ಬೆಲೆಯಲ್ಲಿ ಕಡಲೆ ಕಾಳು ಖರೀದಿಸಲು ವಿಧಿಸುತ್ತಿರುವ ಷರತ್ತುಗಳನ್ನು ಸಡಿಲಿಸಬೇಕು ಎಂದು ವಿಧಾನಸಭೆಯಲ್ಲಿ ಪಕ್ಷ ಭೇದ ಮರೆತು ಸದಸ್ಯರು ಆಗ್ರಹಿಸಿದರು.

ಗಮನ ಸೆಳೆಯುವ ಸೂಚನೆ ಮಂಡಿಸಿದ ಜೆಡಿಎಸ್‌ನ ಎನ್.ಎಚ್. ಕೋನರಡ್ಡಿ, ಒಬ್ಬ ರೈತನಿಂದ ಗರಿಷ್ಠ 10 ಕ್ವಿಂಟಲ್ ಮಾತ್ರ ಖರೀದಿಸಬೇಕು, ಆಧಾರ್‌ ಸಂಖ್ಯೆ ಜೋಡಿಸಿದ ಪಹಣಿ ನೀಡಬೇಕು ಎಂಬ ಷರತ್ತು ವಿಧಿಸಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ದೂರಿದರು.

ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಕಾಂಗ್ರೆಸ್‌ನ ಜಿ.ಎಸ್. ಪಾಟೀಲ, ಬಿಜೆಪಿಯ ಆನಂದ ಚಂದ್ರಶೇಖರ ಮಾಮನಿ ಇದಕ್ಕೆ
ಧ್ವನಿಗೂಡಿಸಿದರು.

ತೋಟಗಾರಿಕೆ ಸಚಿವರ ಪರವಾಗಿ ಸದನಕ್ಕೆ ಉತ್ತರ ನೀಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಷರತ್ತುಗಳಿಂದ ರೈತರಿಗೆ ನಷ್ಟ ಉಂಟಾಗಿಲ್ಲ. ಗದಗ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ 83 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. 1,121 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಕ್ವಿಂಟಲ್‌ ಗೆ ₹4,400 ದರದಲ್ಲಿ ಖರೀದಿ ಆರಂಭವಾಗಿದೆ. 2.02 ಲಕ್ಷ ಟನ್ ವರೆಗೆ ಕಡಲೆಕಾಳು ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದರು.

ಷರತ್ತುಗಳನ್ನು ಈಗಲೇ ಸಡಿಲಿಸಬೇಕು ಎಂದು ಒತ್ತಾಯಿಸಿದ ಕೋನರಡ್ಡಿ ಸಭಾಧ್ಯಕ್ಷರ ಪೀಠದ ಎದುರು ಧರಣಿಗೆ ಮುಂದಾದರು.

ಇದರಿಂದ ಕೆಂಡಾಮಂಡಲರಾದ ಸಚಿವ ಕಾಗೋಡು, ‘ಇಲ್ಲೊಂದು ವ್ಯವಸ್ಥೆ ಇದೆ. ಇಲ್ಲಿಂದ ಹಾರಿ ಹೋಗಿ ಆದೇಶ ಮಾಡಿಕೊಡಲು ಸಾಧ್ಯವೇ. ಏನೆಂದು ಕೊಂಡಿದ್ದೀರಿ’ ಎಂದು ಹರಿಹಾಯ್ದರು. ಹಾಗಿದ್ದರೂ ಕೋನರಡ್ಡಿ ಧರಣಿಗೆ ಮುಂದಾದಾಗ ಅವರನ್ನು ಸಮಾಧಾನ ಪಡಿಸಿದ ಜೆಡಿಎಸ್‌ನ ಎಚ್.ಡಿ. ರೇವಣ್ಣ, ಧರಣಿಯಿಂದ ವಾಪಸ್ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT