ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ₹ 5.78 ಕೋಟಿ ಅಕ್ರಮ: ಎಫ್‌ಐಆರ್‌

Last Updated 24 ಜನವರಿ 2023, 5:06 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿ ಭಾಷೆ ಕಲಿಕೆಯನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ₹ 5.78 ಕೋಟಿಯನ್ನು ಅನ್ಯ ಉದ್ದೇಶಕ್ಕೆ ಅಕ್ರಮವಾಗಿ ಬಳಸಿಕೊಂಡಿರುವ ಆರೋಪದ ಮೇಲೆ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (ಡಿಬಿಎಚ್‌ಪಿಎಸ್‌) ಮಾಜಿ ಕಾರ್ಯಾಧ್ಯಕ್ಷ ಶಿವಯೋಗಿ ನೀರಲಕಟ್ಟಿ ಮತ್ತು ಇತರರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಚೆನ್ನೈನಲ್ಲಿರುವ ಡಿಬಿಎಚ್‌ಪಿಎಸ್‌ ಕೇಂದ್ರ ಕಚೇರಿ ಹಾಗೂ ದಕ್ಷಿಣ ಭಾರತದ ವಿವಿಧೆಡೆ ಇರುವ ಪ್ರಾದೇಶಿಕ ಸಂಸ್ಥೆಗಳಲ್ಲಿ ಅನುದಾನ ದುರ್ಬಳಕೆಯಾಗಿರುವ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯದ ಜಾಗೃತ ಅಧಿಕಾರಿ ನೀತಾ ಪ್ರಸಾದ್‌ ಸಿಬಿಐಗೆ 2022ರ ಫೆಬ್ರುವರಿಯಲ್ಲಿ ದೂರು ನೀಡಿದ್ದರು. ಈ ಕುರಿತು ಸಿಬಿಐನ ಮದುರೈ ಭ್ರಷ್ಟಾಚಾರ ನಿಗ್ರಹ ದಳ ಪ್ರಾಥಮಿಕ ತನಿಖೆ ನಡೆಸಿತ್ತು. ತನಿಖಾಧಿಕಾರಿಯಾಗಿದ್ದ ಡಿವೈಎಸ್‌ಪಿ ಎ. ದಂಡಪಾಣಿ ಸಲ್ಲಿಸಿದ್ದ ದೂರು ಆಧರಿಸಿ ಸಿಬಿಐನ ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಗುರುವಾರ ಎಫ್‌ಐಆರ್‌ ದಾಖಲಿಸಿ, ತನಿಖೆ ಆರಂಭಿಸಿದೆ.

‘ಶಾಲಾ, ಕಾಲೇಜುಗಳಲ್ಲಿ ಹಿಂದಿ ಕಲಿಕೆಯನ್ನು ಪ್ರೋತ್ಸಾಹಿಸಲು ವಿಶೇಷ ತರಗತಿ ನಡೆಸಲು, ಹಿಂದಿ ಕೋರ್ಸ್‌ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಡಿಬಿಎಚ್‌ಪಿಎಸ್‌ಗೆ ಅನುದಾನ ಬಿಡುಗಡೆ ಮಾಡುತ್ತಿದೆ. ಶೇ 75ರಷ್ಟು ಅನುದಾನ ಕೇಂದ್ರದಿಂದ ದೊರಕಿದರೆ, ಶೇ 25ರಷ್ಟನ್ನು ಡಿಬಿಎಚ್‌ಪಿಎಸ್‌ ತನ್ನ ಸ್ವಂತ ಮೂಲದಿಂದ ಬಳಸಬೇಕು. 2004– 2005 ಹಾಗೂ 2016–17ರ ಅವಧಿಯಲ್ಲಿ ಈ ರೀತಿ ಬಿಡುಗಡೆಯಾಗಿದ್ದ ₹ 5.78 ಕೋಟಿಯಷ್ಟು ಮೊತ್ತವನ್ನು ಧಾರವಾಡ ಡಿಬಿಎಚ್‌ಪಿಎಸ್‌ ಅಧೀನದ ಆಯುರ್ವೇದ ಕಾಲೇಜು, ಹೋಮಿಯೋಪಥಿ ಕಾಲೇಜು, ಕಾನೂನು ಕಾಲೇಜು ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ’ ಎಂಬ ಉಲ್ಲೇಖ ಎಫ್‌ಐಆರ್‌ನಲ್ಲಿದೆ.

ಸಂಸ್ಥೆಯ ಅಧ್ಯಕ್ಷರಾಗಿದ್ದ ಆರ್‌.ಎಫ್‌. ನೀರಲಕಟ್ಟಿ, ಅವರ ಮಗ ಶಿವಯೋಗಿ ಆರ್‌. ನೀರಲಕಟ್ಟಿ (ಕಾರ್ಯಾಧ್ಯಕ್ಷರಾಗಿದ್ದರು) ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಆರ್‌.ಎಫ್‌. ನೀರಲಕಟ್ಟಿ ಮೃತಪಟ್ಟಿರುವುದರಿಂದ ಶಿವಯೋಗಿ ಮತ್ತು ಇತರರ ವಿರುದ್ಧ ಮಾತ್ರ ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT