ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಾದ್ಯಂತ 800 ಡಯಾಲೈಸರ್ ಯಂತ್ರಗಳ ಅಳವಡಿಕೆಗೆ ಆರೋಗ್ಯ ಇಲಾಖೆ ಕ್ರಮ

ಏಕ ಬಳಕೆ ಡಯಾಲಿಸಿಸ್ ಸೇವೆಗೆ ಶನಿವಾರ ಚಾಲನೆ
Published 26 ಜನವರಿ 2024, 14:14 IST
Last Updated 26 ಜನವರಿ 2024, 14:14 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಇಲಾಖೆಯು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಒಟ್ಟು 800 ಏಕ ಬಳಕೆಯ ಡಯಾಲೈಸರ್ ಯಂತ್ರಗಳ ಅಳವಡಿಕೆಗೆ ಯೋಜನೆ ರೂಪಿಸಿದ್ದು, ಈ ಯೋಜನೆಯಡಿ ಉಚಿತ ಡಯಾಲಿಸಿಸ್ ಸೇವೆಗೆ ಶನಿವಾರ ಚಾಲನೆ ಸಿಗಲಿದೆ. 

ಇಲ್ಲಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಈಗಾಗಲೇ 20 ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರಗಳ ನೆರವಿನಿಂದ ಪ್ರತಿನಿತ್ಯ 72 ರೋಗಿಗಳಿಗೆ ಡಯಾಲಿಸಿಸ್ ಸೇವೆ ಒದಗಿಸಬಹುದಾಗಿದೆ. ಈ ಸೇವೆಗೆ ಶನಿವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. 

‘ಜನಸಾಮಾನ್ಯರಿಗೆ ಸೋಂಕು ರಹಿತ ಡಯಾಲಿಸಿಸ್ ಸೇವೆ ಕಲ್ಪಿಸಲು ‌ಕ್ರಮ ವಹಿಸಲಾಗಿದೆ. ಡಯಾಲಿಸಿಸ್ ಕೇಂದ್ರಗಳಲ್ಲಿ ಸೇವೆ ಪಡೆದುಕೊಳ್ಳುತ್ತಿರುವವರಿಗೆ ಸೋಂಕು ತಗಲುವ ಸಾಧ್ಯತೆಗಳಿದ್ದವು. ಆದ್ದರಿಂದ ಇಡೀ ಡಯಾಲಿಸಿಸ್‌ ವ್ಯವಸ್ಥೆಯನ್ನು  ಸದೃಢಗೊಳಿಸಲು ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈ ಯಂತ್ರಗಳ ಅಳವಡಿಕೆ ಕಾರ್ಯ ಬಹುತೇಕ ಅಂತಿಮ ಘಟ್ಟ ತಲುಪಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

219 ಕೇಂದ್ರಗಳಲ್ಲಿ ಅಳವಡಿಕೆ: ‘ರಾಜ್ಯದಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗಿದ್ದು, ಹೊಸದಾಗಿ 48 ತಾಲ್ಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನ ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಡಯಾಲೈಸರ್ ಯಂತ್ರಗಳ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ವಿಭಾಗದ 57 ಡಯಾಲಿಸಿಸ್ ಕೇಂದ್ರಗಳಲ್ಲಿ 250 ಯಂತ್ರಗಳು, ಮೈಸೂರು ವಿಭಾಗದ 55 ಕೇಂದ್ರಗಳಲ್ಲಿ 222 ಯಂತ್ರಗಳು, ಬೆಳಗಾವಿ ವಿಭಾಗದ 62 ಕೇಂದ್ರಗಳಲ್ಲಿ 201 ಯಂತ್ರಗಳು, ಕಲಬುರಗಿ ವಿಭಾಗದ 45 ಕೇಂದ್ರಗಳಲ್ಲಿ 127 ಯಂತ್ರಗಳ ಅಳವಡಿಕೆ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದೆ’ ಎಂದು ಹೇಳಿದ್ದಾರೆ.

‘ಶನಿವಾರದಿಂದ 475 ಏಕ ಬಳಕೆಯ ಡಯಾಲೈಸರ್‌ಗಳು ಕಾರ್ಯ ಆರಂಭಿಸಲಿದ್ದು, ರೋಗಿಗಳಿಗೆ ಸೋಂಕು ರಹಿತ ಡಯಾಲಿಸಿಸ್ ಸೇವೆ ಲಭ್ಯವಾಗಲಿದೆ. ಉಳಿದ ಕೇಂದ್ರಗಳಲ್ಲೂ ಒಂದು ತಿಂಗಳೊಳಗೆ ಸೇವೆ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಪ್ರತಿಯೊಂದು ಡಯಾಲಿಸಿಸ್ ಸೈಕಲ್‌ಗೆ ₹1,573 ವೆಚ್ಚವಾಗಲಿದ್ದು, ಸರ್ಕಾರವೇ ವೆಚ್ಚವನ್ನು ಭರಿಸುವ ಮೂಲಕ ರೋಗಿಗಳಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಿದೆ. 800 ಡಯಾಲೈಸರ್‌ ಯಂತ್ರಗಳಿಂದ ವಾರ್ಷಿಕ 7.20 ಲಕ್ಷ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT