ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸಂವಿಧಾನದ ಗರಿಮೆ ಅನನ್ಯ: ನ್ಯಾ.ದೀಕ್ಷಿತ್‌

ಅಮೆರಿಕ ನ್ಯಾಯಮೂರ್ತಿಗಳ ಜೊತೆಗೆ ಸಂವಾದ
Published 6 ಅಕ್ಟೋಬರ್ 2023, 15:37 IST
Last Updated 6 ಅಕ್ಟೋಬರ್ 2023, 15:37 IST
ಅಕ್ಷರ ಗಾತ್ರ

ಬೆಂಗಳೂರು: ‘ಅಮೆರಿಕದ ಸಂವಿಧಾನ ಮತ್ತು ನ್ಯಾಯಾಂಗವು ಮನುಷ್ಯ ಕೇಂದ್ರಿತವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಭಾರತದ ಸಂವಿಧಾನ ಮತ್ತು ನ್ಯಾಯಾಂಗವು ಈ ನೆಲದ ಮೇಲಿನ ಪ್ರತಿಯೊಂದು ಚರಾಚರ ಜೀವಿಗಳ ಬಗ್ಗೆ ಅಂತಃಕರುಣೆ ಹೊಂದಿದೆ. ದಯಾಪರ ಮತ್ತು ಪ್ರೇಮ ಭಾವದಿಂದ ಅವುಗಳ ಅಸ್ತಿತ್ವದ ಹಕ್ಕುಗಳ ರಕ್ಷಣೆ ಮಾಡುತ್ತಾ ಮುನ್ನಡೆಯುತ್ತಿದೆ‘ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅಭಿಪ್ರಾಯಪಟ್ಟರು.

‘ಬೆಂಗಳೂರು ವಕೀಲರ ಸಂಘ‘ದ ವತಿಯಿಂದ ಹೈಕೋರ್ಟ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಅಮೆರಿಕದ 10 ಜನ ಸುಪ್ರೀಂ ಕೋರ್ಟ್‌ ಮತ್ತು ಫೆಡರಲ್‌ ಕೋರ್ಟ್‌ ನ್ಯಾಯಮೂರ್ತಿಗಳ ಜೊತೆಗೆ ನಡೆದ, ‘ಭಾರತ ಮತ್ತು ಅಮೆರಿಕ ಸಂವಿಧಾನಗಳಲ್ಲಿನ ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ಒಂದು ಇಣುಕು ನೋಟ‘ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹದಿನೈದು ಪೈಸೆಯ ಅಂಚೆ ಕಾರ್ಡ್‌ನಲ್ಲಿ ಬರೆದ ಅಹವಾಲು ಮತ್ತು ಪತ್ರಿಕೆಯಲ್ಲಿ ಪ್ರಕಟವಾದ ಪುಟ್ಟ ಲೇಖನವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿ ಶ್ರೀಸಾಮಾನ್ಯರ ದುಃಖಕ್ಕೆ ನೆರವಾಗುವ ಅವಕಾಶವನ್ನು ಭಾರತೀಯ ಸಂವಿಧಾನ ಕಲ್ಪಿಸಿದೆ. ಆದರೆ, ಅಮೆರಿಕ ನ್ಯಾಯಾಂಗವು ದಾವೆಯ ಶಿಷ್ಟಾಚಾರಕ್ಕೆ ಒಗ್ಗಿ ಕೆಲಸ ಮಾಡುವ ಪ್ರವೃತ್ತಿ ಹೊಂದಿದೆ‘ ಎಂದರು.

’ಅಂಬೇಡ್ಕರ್‌ ಅವರು ನಮ್ಮ ಸಂವಿಧಾನ ರೂಪಿಸುವ ಮುನ್ನ ಅದರಲ್ಲಿ ಅಡಕಗೊಳಿಸಬಹುದಾದ ಬಹಳಷ್ಟು ಅಂಶಗಳನ್ನು ಅಮೆರಿಕದ ನೆಲದಲ್ಲೇ ಕುಳಿತು ರೂಪಿಸಿದ್ದರು. ಇದು ಅಮೆರಿಕ ಮತ್ತು ಭಾರತದ ಮಧ್ಯೆ ಇರುವ ಆರೋಗ್ಯಕರ, ಸೌಹಾರ್ದ ಸಂಬಂಧಕ್ಕೆ ಸಾಕ್ಷಿ‘ ಎಂದರು. 

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಪ್ರಸಾದ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ನಿಕಟಪೂರ್ವ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ಜಿಂದಾಲ್‌ ಗ್ಲೋಬಲ್‌ ವಿಶ್ವವಿದ್ಯಾಲಯದ ಕುಲಪತಿ ರಾಜ್‌ಕುಮಾರ್‌ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT