ಬೆಂಗಳೂರು: ಭೂಕುಸಿತದಿಂದ ನಲುಗಿರುವ ಕೇರಳದ ವಯನಾಡ್ ಜನರಿಗೆ ರಾಜ್ಯದ ಕೈಗಾರಿಕೋದ್ಯಮಿಗಳು ಸಹಾಯ ಹಸ್ತ ಚಾಚಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದ್ದಾರೆ.
ವಯನಾಡ್ ದುರಂತದಲ್ಲಿ 412 ಮಂದಿ ಜೀವ ಕಳೆದುಕೊಂಡಿದ್ದು, ಇನ್ನೂ 138 ಜನ ಕಣ್ಮರೆ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯಮ ಲೋಕವು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತರಿಗೆ ಪುನರ್ವಸತಿ, ಅಗತ್ಯ ವಸ್ತುಗಳ ಪೂರೈಕೆ, ಮನೆಗಳ ಪುನರ್ ನಿರ್ಮಾಣ, ಮೂಲಸೌಕರ್ಯ, ಜೀವನೋಪಾಯಕ್ಕೆ ನೆರವು, ವೈದ್ಯಕೀಯ ನೆರವು ಹೀಗೆ ಯಾವ ರೂಪದಲ್ಲಾದರೂ ಉದ್ಯಮಿಗಳು ಸಹಾಯ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.
ಕೇರಳ ರಾಜ್ಯಕ್ಕೆ ನೆರವು ನೀಡಲು ಕರ್ನಾಟಕ ಸರ್ಕಾರ ಬದ್ಧವಾಗಿದ್ದು, ನೆರವು ನೀಡಲು ಬಯಸುವ ಉದ್ಯಮಿಗಳು ಯಾವುದೇ ಮಾಹಿತಿಗೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರನ್ನು ದೂರವಾಣಿ ಸಂಖ್ಯೆ 080-22386796 ಅಥವಾ officeofdicommissioner@gmail.com ಮೂಲಕ ಸಂಪರ್ಕಿಸಬಹುದು ಎಂದೂ ಅವರು ಹೇಳಿದ್ದಾರೆ.