ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಹರ್ಷ ತಂದ ವರ್ಷಧಾರೆ

Published 22 ಏಪ್ರಿಲ್ 2024, 22:14 IST
Last Updated 22 ಏಪ್ರಿಲ್ 2024, 22:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನೆಯ ಅನುಭವ ನೀಡಿದೆ. ಕೆಲವೆಡೆ ಮಳೆ ಆರ್ಭಟ ಹೆಚ್ಚಿದೆ. ಸಿಡಿಲಿಗೆ ಮೂವರು ಮೃತಪಟ್ಟಿದ್ದಾರೆ. ಒಂದು ಎತ್ತು, ಏಳು ಕುರಿಗಳು ಸತ್ತಿವೆ.   

ಕೊಪ್ಪಳ ವರದಿ: ಕೊಪ್ಪಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಬಂದ ಮಳೆ ಜನರ ಸಂಭ್ರಮಕ್ಕೆ ಕಾರಣವಾಯಿತು. ಯಲಬುರ್ಗಾ ತಾಲ್ಲೂಕಿನ ಕೋನಸಾಗರ ದಲ್ಲಿ ಸಿಡಿಲು ಬಡಿದು ಕುರಿ ಮೇಯಿಸು ತ್ತಿದ್ದ ಶ್ರೀನಿವಾಸ ಗೊಲ್ಲರ (16) ಮೃತಪಟ್ಟಿದ್ದಾರೆ.

ತಾಲ್ಲೂಕಿನ ಇರಕಲ್ಲಗಡದಲ್ಲಿ ರಾಮಣ್ಣ ಬಿನ್ನಿ ಅವರಿಗೆ ಸೇರಿದ ಒಂದು ಎತ್ತು, ಏಳು ಕುರಿ ಮೃತಪಟ್ಟಿವೆ.

ಬೀದರ್‌ ವರದಿ: ಬೀದರ್, ಭಾಲ್ಕಿ, ಔರಾದ್‌, ಹುಮನಾಬಾದ್‌ ತಾಲ್ಲೂಕಿನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಗಾಳಿ ಸಮೇತ ಬಿರುಸಿನ ಮಳೆಯಾಗಿದೆ. ಭಾಲ್ಕಿ ತಾಲ್ಲೂಕಿನ ನಿಟ್ಟೂರ (ಬಿ) ಗ್ರಾಮದಲ್ಲಿ ಸಿಡಿಲಿಗೆ ರೈತ ಸುನಿಲ್ ವಿಜಯಕುಮಾರ ಮಗರೆ (32) ಮೃತಪಟ್ಟಿದ್ದಾರೆ. 

ಕಲಬುರಗಿ ವರದಿ: ಜಿಲ್ಲೆಯ ಆಳಂದ ತಾಲ್ಲೂಕಿನ ದೇವಂತಗಿ ಗ್ರಾಮದಲ್ಲಿ ಚಂದ್ರಕಾಂತ ಬಸವರಾಜ ಭಜಂತ್ರಿ (12) ಸಿಡಿಲು ಬಡಿದು ಮೃತಪಟ್ಟರು. ಜಿಲ್ಲೆಯಲ್ಲಿ ಕಮಲಾಪುರ, ಕಾಳಗಿ, ಚಿಂಚೋಳಿ ಸೇರಿ ಇತರೆಡೆಯೂ ಸಾಧಾರಣ ಮಳೆಯಾಗಿದೆ.

ರಾಯಚೂರು ಜಿಲ್ಲೆಯ ಹಟ್ಟಿಚಿನ್ನದಗಣಿ ಹಾಗೂ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗ ವರದಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆ ಯಾಯಿತು. ಬೆಳಿಗ್ಗೆಯಿಂದಲೇ ಬಿಸಿಲಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ದಟ್ಟ ಮೋಡ ಕವಿದು ಮಳೆ ಸುರಿಯಿತು.

ನಾಯಕನಹಟ್ಟಿಯಲ್ಲಿ 45 ನಿಮಿಷ ಮಳೆಯಾಗಿದ್ದು, ತಂಪೆರೆಯಿತು.
ರಾಮದುರ್ಗದಲ್ಲಿ ಸಿಡಿಲು ಬಡಿದು ಮರದ ಕೆಳಗೆ ನಿಂತಿದ್ದ ಮಂಜುನಾಥ, ರಾಮು ಅವರಿಗೆ ಸುಟ್ಟ ಗಾಯಗಳಾಗಿವೆ. ಸಮೀಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. 

ಮಡಿಕೇರಿ ವರದಿ: ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಗೋಣಿಕೊಪ್ಪಲು, ವಿರಾಜಪೇಟೆ, ಸಿದ್ದಾಪುರ ಭಾಗಗಳಲ್ಲಿ ಸುಮಾರು 30 ನಿಮಿಷ ಬಿರುಸಿನ ಮಳೆಯಾಯಿತು. ಬಾಡುತ್ತಿದ್ದ ಕಾಫಿ ತೋಟಗಳು ನಳನಳಿಸುವಂತಾಯಿತು. 

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಹೊರೂರು, ಮಾದಾಪುರ, ಚೆಟ್ಟಳಿ, ದೇವರಪುರ, ತಿತಿಮತಿ, ಅತ್ತೂರು, ಭದ್ರಗೋಳ, ಅರುವತ್ತೊಕ್ಕಲು, ಕೈಕೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.  

ಹುಬ್ಬಳ್ಳಿ ವರದಿ: ಉತ್ತರ ಕರ್ನಾಟಕದ ಧಾರವಾಡ, ಬಳ್ಳಾರಿ, ವಿಜಯಪುರ ಮತ್ತು ಜಿಲ್ಲೆಗಳ ವಿವಿಧೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಯಿತು. ಬಳ್ಳಾರಿ ಜಿಲ್ಲೆಯಲ್ಲಿ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಯಾಗಿದೆ.  

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ವಿವಿಧೆಡೆಯೂ ಭಾರಿ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಹಲವೆಡೆ ತಗಡಿನ ಚಾವಣಿ ಹಾರಿವೆ. 

ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಾದ್ಯಂತ ಬಿರುಗಾಳಿ ಸಹಿತ ಮಳಯಾಗಿದ್ದು, 50ಕ್ಕೂ ಹೆಚ್ಚು ಪತ್ರಾಸ್‌ ಮನೆಗಳಿಗೆ ಹಾನಿಯಾಗಿದೆ.

ಪಟ್ಟಣದ ಎಂಇಎಸ್‌ ಐಟಿಐ ಕಾಲೇಜಿನಲ್ಲಿ ಕೊಠಡಿಗೆ ಮಳೆ ನೀರು ಹರಿದಿದ್ದು, ಕಂಪ್ಯೂಟರ್‌, ಕಾಗದ ಪತ್ರಗಳು ಹಾಳಾದವು. ವಿವಿಧೆಡೆ ಪತ್ರಾಸ್‌ ಮನೆ ಹಾಣಿಯಾಗಿದೆ. ಮರಗಳು ಉರುಳಿವೆ. ನಿಂಬೆ ಗಿಡಗಳಿಗೂ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT