ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್‌ ಅಧಿಕಾರಿ ಡಾ.ಬಿ.ಸುಧಾ ಮನೆ ಮೇಲೆ ಎಸಿಬಿ ದಾಳಿ: 200 ಆಸ್ತಿಗಳ ದಾಖಲೆ ವಶ

ಸೊತ್ತು ಮೌಲ್ಯ ಲೆಕ್ಕಹಾಕುತ್ತಿರುವ ಅಧಿಕಾರಿಗಳು
Last Updated 9 ನವೆಂಬರ್ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಎಸ್‌ ಅಧಿಕಾರಿ ಡಾ.ಬಿ.ಸುಧಾ ಮತ್ತು ಅವರ ಶಂಕಿತ ಬೇನಾಮಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದ್ದ ವೇಳೆ ನೂರಾರು ಕೋಟಿ ರೂಪಾಯಿ ಮೌಲ್ಯದ 200ಕ್ಕೂ ಹೆಚ್ಚು ಸ್ಥಿರಾಸ್ತಿ ದಾಖಲೆಗಳು ಪತ್ತೆಯಾಗಿವೆ. ಈ ಆಸ್ತಿಗಳ ಖಚಿತ ಮೌಲ್ಯ ಲೆಕ್ಕಹಾಕುವ ಕೆಲಸದಲ್ಲಿ ಎಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ.

ಸುಧಾ ಅವರ ಎರಡು ಮನೆಗಳು, ಕಚೇರಿ ಸೇರಿದಂತೆ ಬೆಂಗಳೂರು, ಮೈಸೂರು, ಉಡುಪಿ ಜಿಲ್ಲೆಗಳಲ್ಲಿ ಏಳು ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ಶನಿವಾರ ಏಕಕಾಲಕ್ಕೆ ದಾಳಿ ನಡೆಸಿದ್ದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸಿಬಿ ಐಜಿಪಿ ಎಂ. ಚಂದ್ರಶೇಖರ್‌, ‘ಸುಧಾ ಮತ್ತು ಅವರ ಜತೆ ವ್ಯವಹಾರಿಕ ನಂಟು ಹೊಂದಿರುವ ವ್ಯಕ್ತಿಗಳ ಮನೆಗಳಲ್ಲಿ 200ಕ್ಕೂ ಹೆಚ್ಚು ಸ್ಥಿರಾಸ್ತಿಗಳ ದಾಖಲೆಗಳು ಪತ್ತೆಯಾಗಿವೆ. ಸ್ಥಿರಾಸ್ತಿ ಖರೀದಿ ಕ್ರಯ ಪತ್ರಗಳು, ಜಿಪಿಎ ಪತ್ರಗಳು, ಖರೀದಿಗೆ ಮುಂಗಡ ನೀಡಿರುವುದಕ್ಕೆ ಸಂಬಂಧಿಸಿದ ಒಪ್ಪಂದ ಪತ್ರಗಳು ಮತ್ತು ಇತರ ದಾಖಲೆಗಳು ದೊರೆತಿವೆ’ ಎಂದರು.

‘ಈ ಆಸ್ತಿಗಳ ನಿಖರ ಮೌಲ್ಯ ಅಂದಾಜಿಸಲು ಇನ್ನೂ ಎರಡು ದಿನ ಬೇಕಾಗುತ್ತದೆ’ ಎಂದು ಹೇಳಿದರು.

ನಿವೃತ್ತ ಡಿವೈಎಸ್‌ಪಿ ಚಂದ್ರಶೇಖರ್‌ ಅವರ ಬ್ಯಾಟರಾಯನಪುರದ ಮನೆಯ ಮೇಲೂ ಶನಿವಾರ ದಾಳಿ ನಡೆಸಲಾಗಿತ್ತು. ಅವರ ಪತ್ನಿ ರೇಣುಕಾ ಮತ್ತು ಸುಧಾ ನಡುವೆ ವ್ಯಾವಹಾರಿಕ ನಂಟು ಇರುವುದು ತನಿಖೆಯಲ್ಲಿ ಪತ್ತೆಯಾಗಿದೆ. ರೇಣುಕಾ ಅವರ ಮನೆಯಲ್ಲೇ ಹೆಚ್ಚಿನ ಸಂಖ್ಯೆಯ ಸ್ಥಿರಾಸ್ತಿ ದಾಖಲೆಗಳು ದೊರಕಿವೆ. ಸುಧಾ ಭ್ರಷ್ಟಾಚಾರದ ಮೂಲಕ ಸಂಗ್ರಹಿಸಿದ ಹಣವನ್ನು ರೇಣುಕಾ ಮೂಲಕ ಹೂಡಿಕೆ ಮಾಡುತ್ತಿದ್ದರು ಎಂಬ ಶಂಕೆ ಮೇಲೆ ಅವರ ಮನೆಯ ಮೇಲೂ ದಾಳಿ ನಡೆಸಲಾಗಿತ್ತು ಎಂಬ ಮಾಹಿತಿ ತನಿಖಾ ಸಂಸ್ಥೆಯ ಮೂಲಗಳಿಂದ ಲಭಿಸಿದೆ.

50 ಬ್ಯಾಂಕ್‌ ಖಾತೆ: ಆರೋಪಿ ಅಧಿಕಾರಿ ಮತ್ತು ಅವರ ಬೇನಾಮಿಗಳು ಎಂದು ಶಂಕಿಸಲಾಗಿರುವ ವ್ಯಕ್ತಿಗಳು ಹೊಂದಿರುವ 50 ಬ್ಯಾಂಕ್‌ ಖಾತೆಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಖಾತೆಗಳಲ್ಲಿ ₹ 3.5 ಕೋಟಿ ಠೇವಣಿ ಇರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ ಎಂದು ಐಜಿಪಿ ಮಾಹಿತಿ ನೀಡಿದರು.

ಆರೋಪಿಗಳ ಮನೆಯಲ್ಲಿ ₹ 36.89 ಲಕ್ಷ ನಗದು, 3.7 ಕೆ.ಜಿ. ಚಿನ್ನ, 10.5 ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್‌ ಖಾತೆಗಳು, ಹೂಡಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ವಿಚಾರಣೆಗೆ ಹಾಜರು: ಸುಧಾ ಸೋಮವಾರ ಎಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಎಸಿಬಿ ಬೆಂಗಳೂರು ನಗರ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ನೇತೃತ್ವದ ತಂಡ ಕೆಲಕಾಲ ವಿಚಾರಣೆ ನಡೆಸಿ, ಕಳುಹಿಸಿದೆ.

ಬಿಡಿಎನಲ್ಲೇ ಠಿಕಾಣಿ

ಡಾ.ಬಿ. ಸುಧಾ 2005ರ ಬ್ಯಾಚ್‌ನ ಕೆಎಎಸ್‌ ಅಧಿಕಾರಿ. ತಹಶೀಲ್ದಾರ್‌ ಹುದ್ದೆಯಲ್ಲಿ ಕೆಲವೆಡೆ ಕೆಲಸ ಮಾಡಿದ್ದರು. ದೀರ್ಘಕಾಲದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲೇ (ಬಿಡಿಎ) ಇದ್ದರು. ಬಿಡಿಎನಲ್ಲಿ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ, ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದ ಅವರು ಕೆಲವು ತಿಂಗಳ ಹಿಂದೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಚೇರಿಯ ಆಡಳಿತಾಧಿಕಾರಿ ಹುದ್ದೆಗೆ ವರ್ಗಾವಣೆಗೊಂಡಿದ್ದರು.

2015ರ ನವೆಂಬರ್‌ನಲ್ಲಿ ಬಿಡಿಎ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದಾಗ ವಿಜಯ ಬ್ಯಾಂಕ್‌ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯ ಜಮೀನಿನ ಭೂಪರಿವರ್ತನೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಧಾ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಶೋಧ ನಡೆಸಿದ್ದರು.

ಸಿನಿಮಾ ರಂಗದ ನಂಟು

ಸುಧಾ ಪತಿ ಸ್ಟ್ರೋನಿ ಪಯಾಸ್‌ ಸಿನಿಮಾ ನಿರ್ಮಾಪಕರಾಗಿದ್ದಾರೆ. ‘ಸುಧಾ ಕ್ರಿಯೇಷನ್ಸ್‌’ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದು, ‘ರಾಮನ ಸವಾರಿ’ ಎಂಬ ಮಕ್ಕಳ ಚಿತ್ರ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಮಾಡಿರುವ ಹೂಡಿಕೆಯ ಬಗ್ಗೆಯೂ ಎಸಿಬಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಬಡ್ಡಿ ದಂಧೆಯ ನಂಟು?

ಶೋಧ ನಡೆಸಿರುವ ಸ್ಥಳಗಳಲ್ಲಿ ಬೇರೆ ಬೇರೆ ವ್ಯಕ್ತಿಗಳ ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ ಸಹಿ ಮಾಡಿದ 50 ಚೆಕ್‌ಗಳು ಪತ್ತೆಯಾಗಿವೆ. ಆರೋಪಿ ಅಧಿಕಾರಿಯ ಹಣವನ್ನು ದುಬಾರಿ ದರದಲ್ಲಿ ಬಡ್ಡಿಗೆ ನೀಡುತ್ತಿದ್ದ ಶಂಕೆ ಇದೆ. ಚೆಕ್‌ಗಳನ್ನು ನೀಡಿದ ವ್ಯಕ್ತಿಗಳು, ಅವರ ಜತೆಗೆ ಆರೋಪಿಗಳ ವ್ಯಾವಹಾರಿಕ ನಂಟು, ಬ್ಯಾಂಕ್‌ ಖಾತೆಗಳಲ್ಲಿ ನಡೆದಿರುವ ವಹಿವಾಟು ಪತ್ತೆಗೆ ತನಿಖಾ ತಂಡ ಸಿದ್ಧತೆ ನಡೆಸಿದೆ.

ಸುಧಾ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಲಯ ಎಸಿಬಿಗೆ ಆದೇಶಿಸಿತ್ತು. ಆಗಸ್ಟ್‌ 27ರಂದು ಎಸಿಬಿ ಅಧಿಕಾರಿಗಳು ಸುಧಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಶನಿವಾರ ದಾಳಿಮಾಡಿ ಶೋಧ ನಡೆಸಲಾಗಿತ್ತು.

* ಸುಧಾ ಅವರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಕಷ್ಟು ಮಾಹಿತಿ ಒದಗಿಸಿದ್ದಾರೆ. ಇನ್ನೂ ಯಾರಾದರೂ ಮಾಹಿತಿ ಹೊಂದಿದ್ದರೆ ತನಿಖಾ ತಂಡವನ್ನು ಸಂಪರ್ಕಿಸಬಹುದು.
- ಎಂ. ಚಂದ್ರಶೇಖರ್‌, ಐಜಿಪಿ, ಎಸಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT