ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಎರಡು ತಾಸು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಶಿವಕುಮಾರ್ ಅವರಿಗೆ ಸಮನ್ಸ್ ನೀಡಿದ್ದರು. ಅದರಂತೆ ನಗರದಲ್ಲಿನ ಲೋಕಾಯುಕ್ತ ಕಚೇರಿಗೆ ಅವರು ಗುರುವಾರ ಮಧ್ಯಾಹ್ನ ಬಂದಿದ್ದರು. ಲೋಕಾಯುಕ್ತ ಎಸ್‌ಪಿ ಕೆ.ವಂಶಿಕೃಷ್ಣ ಮತ್ತು ಡಿವೈಎಸ್‌ಪಿ ಸತೀಶ್ ಎಂ.ಎಚ್. ಅವರ ತಂಡವು ವಿಚಾರಣೆ ನಡೆಸಿದೆ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.
‘ಮಧ್ಯಾಹ್ನ 2.15ರಿಂದ 4.15ರವರೆಗೆ ವಿಚಾರಣೆ ನಡೆಸಲಾಗಿದೆ. ಆದಾಯ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
ವಿಚಾರಣೆ ಮುಗಿಸಿ ಹೊರಬಂದ ಶಿವಕುಮಾರ್, ‘ಬುಧವಾರ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಆಲಮಟ್ಟಿ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವಿದ್ದ ಕಾರಣ ಗುರುವಾರ ಹಾಜರಾಗುತ್ತೇನೆ ಎಂದು ಮನವಿ ಮಾಡಿಕೊಂಡಿದ್ದೆ. ಅದರಂತೆ ವಿಚಾರಣೆಗೆ ಬಂದಿದ್ದೆ’ ಎಂದರು.
‘ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಒಂದಷ್ಟು ವಿಚಾರಗಳಲ್ಲಿ ಸ್ಪಷ್ಟನೆ ಕೇಳಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಇರುವ ದಾಖಲೆಗಳನ್ನು ಸಲ್ಲಿಸುತ್ತೇನೆ’ ಎಂದರು.
ಶಿವಕುಮಾರ್ ವಿರುದ್ಧ 2017ರಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಈಗಿನ ಕಾಂಗ್ರೆಸ್ ಸರ್ಕಾರವು ವಾಪಸ್ ಪಡೆದುಕೊಂಡಿತ್ತು. ಪ್ರಕರಣದ ತನಿಖೆಯನ್ನು ನಡೆಸುವಂತೆ ಲೋಕಾಯುಕ್ತಕ್ಕೆ ಸೂಚಿಸಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತವು ತನಿಖೆ ಆರಂಭಿಸಿತ್ತು. ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.