ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಭಿಚಾರ: ನೈತಿಕ ತಳಹದಿ ಮೇಲೆ ನಿರ್ಧರಿಸಿ: ದತ್ತಾತ್ರೇಯ ಹೊಸಬಾಳೆ

Last Updated 21 ಅಕ್ಟೋಬರ್ 2018, 17:18 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಭಿಚಾರ ಕಾನೂನು ಪ್ರಕಾರ ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರಬಹುದು. ಆದರೆ, ನೈತಿಕ ತಳಹದಿಯ ಮೇಲೆ ಅದು ಸರಿಯೋ ತಪ್ಪೋ ಎಂಬುದನ್ನು ನಾವು ನಿರ್ಧರಿಸಬೇಕು. ದೇಶ ನೈತಿಕವಾಗಿ ಏನನ್ನು ಸರಿ ಎಂದು ಒಪ್ಪಿಕೊಂಡಿದೆಯೋ ಅದನ್ನು ಕಾನೂನು ಮಾಡಬೇಕು. ಕುಟುಂಬ ವ್ಯವಸ್ಥೆಯ ಪಾವಿತ್ರ್ಯತೆಯನ್ನು ರಕ್ಷಿಸಬೇಕು.

– ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಮಾತು.

‘ಮಂಥನ’ ಹೆಬ್ಬಾಳದ ಆಶ್ರಯದಲ್ಲಿ ಕೌಟುಂಬಿಕ ಮೌಲ್ಯಗಳು ಸವಾಲುಗಳು ಮತ್ತು ಪರಿಹಾರ ಕುರಿತ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ವ್ಯಭಿಚಾರ ಅನ್ನುವುದು ನಮ್ಮ ಸಂಸ್ಕೃತಿಯ ಹಿನ್ನೆಲೆಯಲ್ಲೇ ಇಲ್ಲ. 2015ರಲ್ಲಿ ಸುಪ್ರೀಂ ಕೋರ್ಟ್‌ ಲಿವಿಂಗ್‌ ಟುಗೆದರ್‌ (ಪುರುಷ ಮತ್ತು ಮಹಿಳೆ ವಿವಾಹವಾಗದೆ ಜತೆಯಾಗಿ ಇರುವುದು) ಅಪರಾಧ ಅಲ್ಲ ಎಂದು ಹೇಳಿತು. ಅಂದೇ ವ್ಯಭಿಚಾರ ಅಪರಾಧ ಅಲ್ಲ ಎಂಬ ಚರ್ಚೆಗೂ ಬುನಾದಿ ಬಿತ್ತು. ಹಾಗೆ ನೋಡಿದರೆ ನಮ್ಮ ಎಷ್ಟೋ ಕಾನೂನುಗಳು ನಮ್ಮ ನೆಲದ್ದಲ್ಲ. ಪಾಶ್ಚಾತ್ಯರಿಂದ ಆಮದು ಮಾಡಿಕೊಂಡಿದ್ದೇವೆ. ಅವನ್ನೆಲ್ಲ ಇಲ್ಲಿಗೆ ತಕ್ಕಂತೆ ಬದಲಾಯಿಸಬೇಕಾಗಿದೆ’ ಎಂದು ಅವರು ಹೇಳಿದರು.

ಹೆಣ್ಣಿನ ಮೇಲೆ ದೌರ್ಜನ್ಯ, ಶೋಷಣೆ ಸಂಬಂಧಿಸಿದ ಪ್ರಶ್ನೆಗೆ ಹೊಸಬಾಳೆ ಅವರ ಉತ್ತರ ಹೀಗಿತ್ತು...

ಸ್ತ್ರೀತ್ವ ಅನ್ನುವುದೇ ಒಂದು ಶಕ್ತಿ. ಆದರೆ, ಇಂದು ಸ್ವೇಚ್ಛೆಯೇ ಸ್ವಾತಂತ್ರ್ಯ ಎಂಬ ಭಾವನೆ ಯುವಜನರಲ್ಲಿ ಇದೆ. ಅದಕ್ಕೆ ತಕ್ಕಂತೆ ಮಾಧ್ಯಮಗಳು ಧಾರಾವಾಹಿ, ಚಲನಚಿತ್ರಗಳ ಮೂಲಕ ರಾಜಿಯಿಲ್ಲದ ಸಂಭಾಷಣೆಗಳನ್ನು ಪ್ರಸಾರ ಮಾಡುತ್ತಿವೆ. ಪರಸ್ಪರ ವಿರುದ್ಧ ಮಾತನಾಡುವ, ಸಂಬಂಧಗಳಿಗೆ ಮೌಲ್ಯವಿಲ್ಲದಂಥ ವಿಷಯಗಳನ್ನು ಬಿತ್ತರಿಸುವ ಕೆಲಸ ಆಗುತ್ತಿದೆ. ಅದಕ್ಕಾಗಿ ನಾವು ಸಂಘದಲ್ಲಿ ಸಾಧ್ಯವಾದಷ್ಟು ಯುವಜನರಿಗೆ ಸಂಸ್ಕಾರ ಕೊಡಲು ಪ್ರಯತ್ನಿಸುತ್ತೇವೆ. ಹೆಣ್ಣಿನ ಜತೆ ಹೇಗೆ ನಡೆದುಕೊಳ್ಳಬೇಕು. ಯುವಜನರ ಆದ್ಯತೆಯೇನು ಎಂಬ ಬಗ್ಗೆ ತಿಳಿಹೇಳುತ್ತೇವೆ. ಇದನ್ನೇ ಮನೆಯಲ್ಲೂ ಮಾಡಬಹುದು. ಹಿಂದೆ ಕೂಡು ಕುಟುಂಬಗಳಿದ್ದಾಗ ಇವೆಲ್ಲಾ ಸಹಜವಾಗಿ ಬರುತ್ತಿತ್ತು. ವಿಭಕ್ತ ಕುಟುಂಬಗಳಾದ ಬಳಿಕ ಸಂಬಂಧಗಳು ವಿಘಟನೆಗೊಳ್ಳುತ್ತಿವೆ. ಆದರೆ, ಮನಸ್ಸು ಮಾಡಿದರೆ ಅಲ್ಲಿಯೂ ಒಳ್ಳೆಯ ಸಂಸ್ಕಾರ ತರಬಹುದು. ಮಕ್ಕಳಿಗೆ ಸಂಸ್ಕಾರಭರಿತ ಕಥೆಗಳನ್ನು ಹೇಳಬೇಕು ಎಂದು ಹೇಳಿದರು.

ಮೊಮ್ಮಕ್ಕಳು ಮಾತೇ ಕೇಳುತ್ತಿಲ್ಲ ಏನು ಮಾಡಲಿ?

ಹಿರಿಯ ನಾಗರಿಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊಸಬಾಳೆ, ‘ಇದು ಎಲ್ಲ ಪೀಳಿಗೆಯವರಲ್ಲಿಯೂ ಕೇಳಿಬರುವ ಸಮಸ್ಯೆ. ನಾವು ಮೊಮ್ಮಕ್ಕಳಾಗಿದ್ದಾಗ ನಮ್ಮ ಹಿರಿಯರೂ ಹೀಗೇ ಹೇಳುತ್ತಿದ್ದರು. ಆದ್ದರಿಂದ ಮೊಮ್ಮಕ್ಕಳನ್ನು ಅವರಿಗೆ ಆಸಕ್ತಿಯಿರುವ ವಿಚಾರದಲ್ಲಿ ಮಾತನಾಡಿಸಿ. ನಿಮ್ಮತ್ತ ಸೆಳೆಯಿರಿ. ನಿಧಾನಕ್ಕೆ ನಿಮ್ಮ ವಿಚಾರಗಳನ್ನು ಹೇಳುತ್ತಾ ಬನ್ನಿ. ಹೀಗೆ ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಸರಿದಾರಿಗೆ ತರಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT