ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ್‌ ಜೊತೆ ಧೂಮಪಾನ ಆರೋಪ: ಸೀನ ವಿರುದ್ದದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Published : 26 ಸೆಪ್ಟೆಂಬರ್ 2024, 15:48 IST
Last Updated : 26 ಸೆಪ್ಟೆಂಬರ್ 2024, 15:48 IST
ಫಾಲೋ ಮಾಡಿ
Comments

ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಾವರಣದಲ್ಲಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌ ಧೂಮಪಾನ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಜೊತೆ ಕುಳಿತಿದ್ದವರ ವಿರುದ್ಧ ನಿಷೇಧಿತ ತಂಬಾಕು ಸೇವನೆ ಆರೋಪದಡಿ ಕೈದಿ ಶ್ರೀನಿವಾಸ್ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಈ ಸಂಬಂಧ ಶ್ರೀನಿವಾಸ್‌ ಅಲಿಯಾಸ್ ಕುಳ್ಳ ಸೀನ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಶ್ರೀನಿವಾಸ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಜೆ.ಚೌಟ, ‘ಆರೋಪಗಳಿಗೂ ಮತ್ತು ದೂರಿನಲ್ಲಿ ದಾಖಲಿಸಿರುವ ಕಲಂಗಳಿಗೂ ತಾಳೆಯಾಗುವುದಿಲ್ಲ. ಅಂತೆಯೇ, ಜೈಲುಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದು ಒಂದು ಕಡೆ ಹೇಳಿದರೆ ಮತ್ತೊಂದೆಡೆ ಧೂಮಪಾನಕ್ಕೆ ಪ್ರತ್ಯೇಕ ಜಾಗದ ಅವಕಾಶ ಕಲ್ಪಿಸಲಾಗಿದೆ ಎಂಬ ತದ್ವಿರುದ್ಧ ನಿಯಮ ಜಾರಿಯಲ್ಲಿವೆ. ಈ ಪ್ರಕರಣದಲ್ಲಿ ಅರ್ಜಿದಾರರು ಧೂಮಪಾನ ಮಾಡುತ್ತಿರಲಿಲ್ಲ. ಹೀಗಾಗಿ, ಇವರ ವಿರುದ್ಧದ ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಪ್ರಕರಣಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಜಿ.ಲಕ್ಷ್ಮಿಕಾಂತ್‌ ವಕಾಲತ್ತು ವಹಿಸಿದ್ದರು. ಪ್ರಾಸಿಕ್ಯೂಷನ್‌ ಪರ ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎ.ಬೆಳ್ಳಿಯಪ್ಪ ಹಾಜರಿದ್ದರು.

‘ಪರಪ್ಪನ ಅಗ್ರಹಾರ ಪೊಲೀಸರು 2024ರ ಆಗಸ್ಟ್‌ 26ರಂದು ಕರ್ನಾಟಕ ಕಾರಾಗೃಹಗಳ ತಿದ್ದುಪಡಿ ಕಾಯ್ದೆ–2022ರ ಅನುಸಾರ ದಾಖಲಿಸಿದ್ದ ಎಫ್‌ಐಆರ್‌ ಮತ್ತು ಈ ಸಂಬಂಧ 9ನೇ ಎಸಿಎಂಎಂ ನ್ಯಾಯಾಲಯದಲ್ಲಿನ ವಿಚಾರಣೆಯನ್ನು ರದ್ದುಗೊಳಿಸಬೇಕು’ ಎಂದು ಕೋರಿ ಶ್ರೀನಿವಾಸ್ ಈ ಅರ್ಜಿ ಸಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT