ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಲಿಮಂಜಾರೊ ಪರ್ವತವೇರಿದ 8ರ ಬಾಲಕಿ

Published 11 ಜುಲೈ 2023, 4:44 IST
Last Updated 11 ಜುಲೈ 2023, 4:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಂಟು ವರ್ಷದ ಬಾಲಕಿ ಆದ್ಯ ಬೆಣ್ಣೂರ್ ಅವರು ಆಫ್ರಿಕಾದ ಅತ್ಯಂತ ಎತ್ತರದ ಶಿಖರ ಕಿಲಿಮಂಜಾರೊ ಏರುವ ಮೂಲಕ, ದಾಖಲೆ ಮಾಡಿದ್ದಾರೆ.

ಜಕ್ಕೂರಿನ ಗ್ರೀನ್‌ಫೀಲ್ಡ್‌ ಪಬ್ಲಿಕ್‌ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ಆದ್ಯ, ಈ ಸಾಧನೆ ಮಾಡಿದ ಭಾರತದ ಅತ್ಯಂತ ಕಿರಿಯ ಬಾಲಕಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ತಮ್ಮ ತಂದೆ ಹರ್ಷ ಬೆಣ್ಣೂರ್ ಅವರೊಂದಿಗೆ ಈ ಸಾಹಸಯಾತ್ರೆ ಕೈಗೊಂಡ ಆದ್ಯ, ಜೂನ್‌ 20 ರಂದು ಶಿಖರದ ತುದಿ ತಲುಪಿದ್ದಾರೆ. 19,340 ಅಡಿ ಎತ್ತರದ ಈ ಪರ್ವತ ತಾಂಜಾನಿಯಾ ದೇಶದಲ್ಲಿದೆ. ಪರ್ವತವನ್ನು ಹತ್ತಿ ಇಳಿಯಲು ಏಳೂವರೆ ದಿನ ತೆಗೆದುಕೊಂಡಿದ್ದಾರೆ. ಪ್ರತಿದಿನ ಸರಾಸರಿ 12 ಗಂಟೆ ಚಾರಣ ಮಾಡಿದ್ದಾರೆ.

‘ನನ್ನ ತಂದೆ ಈ ಹಿಂದೆಯೇ ಕಿಲಿಮಂಜಾರೊ ಪರ್ವತವನ್ನೇರಿದ್ದು, ನನಗೂ ಅದೇ ಸಾಹಸ ಮಾಡಬೇಕೆಂದು ಅನಿಸಿತು. ಸೈಕ್ಲಿಂಗ್‌, ಈಜು, ಓಟ ಸೇರಿದಂತೆ ವಿವಿಧ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿ, ತಂದೆಯವರು ನನ್ನನ್ನು ಪರ್ವತಾರೋಹಣಕ್ಕೆ ಸಜ್ಜುಗೊಳಿಸಿದ್ದರು. ತಾಯಿ ಮಂಗಳಾ ಅವರು ಪ್ರೇರಕ ಶಕ್ತಿಯಾದರು’ ಎಂದು ಆದ್ಯ ಹೇಳಿದರು.

‘ಈ ಹಿಂದೆ ಎವರೆಸ್ಟ್‌ ಬೇಸ್‌ಕ್ಯಾಂಪ್‌ಗೆ ಹೋಗಿದ್ದೆ. ಆಗ ದೊರೆತಿದ್ದ ಅನುಭವ ಈ ಚಾರಣದ ವೇಳೆ ನೆರವು ನೀಡಿತು. ಕಠಿಣ ಪರಿಸ್ಥಿತಿಯಲ್ಲೂ ಮಾನಸಿಕವಾಗಿ ಸದೃಢವಾಗಿರಲು ಸಾಧ್ಯವಾಯಿತು. ಎವರೆಸ್ಟ್‌ ಬೇಸ್‌ಕ್ಯಾಂಪ್‌ ಚಾರಣಕ್ಕೆ ಹೋಲಿಸಿದರೆ, ಕಿಲಿಮಂಜಾರೊ ಪರ್ವತಾರೋಹಣ ಹೆಚ್ಚು ಸವಾಲಿನಿಂದ ಕೂಡಿತ್ತು’ ಎಂದು ಅನುಭವ ಹಂಚಿಕೊಂಡರು.

‘ನಾನು 2018 ರಲ್ಲಿ ಮೊದಲ ಬಾರಿ ಕಿಲಿಮಂಜಾರೊ ಹತ್ತಿದ್ದೆ. ಅದು ಮಗಳಿಗೆ ಪ್ರೇರಣೆ ನೀಡಿತು. ಪರ್ವತಾರೋಹಣದ ವೇಳೆ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಮಗಳನ್ನು ಸಜ್ಜುಗೊಳಿಸಿದ್ದೆ. ಪರ್ವತದ ಮೇಲಕ್ಕೇರಿದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಉಸಿರಾಟ ಕಷ್ಟವಾಗುತ್ತಿತ್ತು. ನಾವು ತುತ್ತತುದಿ ತಲುಪಿದ ದಿನ ತಾಪಮಾನ ಮೈನಸ್‌ 20 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು’ ಎಂದು ನಗರದಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಹರ್ಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT