ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್‌ ಆಸ್ತಿ: ಸುಪ್ರೀಂನಲ್ಲಿ ರಾಜ್ಯದ ಅರ್ಜಿ ವಜಾ

ಚೌಕಿದಾರ್‌ ಹೋರಾಟಕ್ಕೆ ಜಯ: ಅನ್ವರ್‌ ಮಾಣಿಪ್ಪಾಡಿ
Last Updated 29 ಮಾರ್ಚ್ 2019, 19:09 IST
ಅಕ್ಷರ ಗಾತ್ರ

ಬೆಂಗಳೂರು: ‘ವಕ್ಫ್‌ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ್ದು, ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕಿದೆ’ ಎಂದು ಬಿಜೆಪಿ ಮುಖಂಡ ಅನ್ವರ್‌ ಮಾಣಿಪ್ಪಾಡಿ ಹೇಳಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 2.3 ಲಕ್ಷ ಕೋಟಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದಂತೆ ವರದಿ ಸಲ್ಲಿಸಿದ್ದೆ. ಈ ವರದಿಗೆ ಸುಪ್ರೀಂ ಕೋರ್ಟ್‌ ಮನ್ನಣೆ ನೀಡಿದೆ. ಇದು ಚೌಕಿದಾರ ಅಭಿಯಾನಕ್ಕೆ ಸಂದ ಜಯ’ ಎಂದರು.

‘ಹಗರಣದಲ್ಲಿ ಸಿಲುಕಿರುವ 28 ಸಾವಿರ ಎಕರೆ ಭೂಮಿಯನ್ನು, ಮೂರು ವೈದ್ಯಕೀಯ ಕಾಲೇಜು, 12 ಎಂಜಿನಿಯರಿಂಗ್‌ ಕಾಲೇಜು, ನೂರಾರು ವೃತ್ತಿಪರ ಕಾಲೇಜು, ಮಲ್ಟಿಫ್ಲೆಕ್ಸ್, ಮಾಲ್‌, ಪಂಚತಾರಾ ಹೋಟೆಲ್‌ ಅನ್ನು ವಕ್ಫ್‌ ಮಂಡಳಿ ಅಧೀನದಲ್ಲಿ ಪುನರ್‌ ಸ್ಥಾಪಿಸಿ ಬಡ ಮುಸ್ಲಿಂ ಸಮುದಾಯಕ್ಕೆ ಸಹಾಯ ಮಾಡುವುದು ಅನಿವಾರ್ಯವಾಗಿದೆ’ ಎಂದು ಅವರು ಹೇಳಿದರು.

‘2013ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ವರದಿಯನ್ನು ಸಲ್ಲಿಸಲಾಗಿತ್ತು. ಹಗರಣದಲ್ಲಿ ವಂಚನೆಯಾದಷ್ಟು ಹಣವನ್ನು ವಸೂಲಿ ಮಾಡುವ ಸಲುವಾಗಿ ಸರ್ಕಾರ ಕಾಯ್ದೆ ರೂಪಿಸಿತ್ತು. ಈ ಬಗ್ಗೆ ಅಧಿಸೂಚನೆ ಹೊರಡಿಸಬೇಕಿತ್ತು. ಬಳಿಕ ಬಂದ ಕಾಂಗ್ರೆಸ್‌ ಸರ್ಕಾರ ವರದಿಯನ್ನು ಸದನದಲ್ಲಿ ಮಂಡಿಸಲಿಲ್ಲ. ವರದಿಯನ್ನು ಎರಡೂ ಸದನಗಳಲ್ಲಿ ಮಂಡಿಸುವುದಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಹೈಕೋರ್ಟ್‌ನಲ್ಲಿ ತಿಳಿಸಿದ್ದರು. ವರದಿ ಮಂಡಿಸದ ಕಾರಣ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗಿತ್ತು’ ಎಂದರು.

‘ಈ ಬಗ್ಗೆ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸಿದ್ದ ಕೋರ್ಟ್‌, ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT