ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಬಿಐ ತನಿಖೆಯೇ ನಡೆಯಲಿ: ಅಶ್ವತ್ಥನಾರಾಯಣ

Published 31 ಮೇ 2024, 16:07 IST
Last Updated 31 ಮೇ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್ ಆಫ್‌ ಇಂಡಿಯಾವು ಸಿಬಿಐ ಕಚೇರಿಗೆ ದೂರು ನೀಡಿದ್ದು, ಅದರ ಅನ್ವಯ ಸಿಬಿಐ ನಡೆಯಲಿ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಆಗ್ರಹಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಈ ಹಗರಣಕ್ಕೆ ಸರ್ಕಾರವೇ ನೇರ ಹೊಣೆ. ನಕಲಿ ಖಾತೆ ತೆರೆದು, ಕ್ರಿಯಾ ಯೋಜನೆ ಇಲ್ಲದೆ ಹಣ ವರ್ಗಾವಣೆ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಈ ಅವ್ಯವಹಾರವು ಪರಿಶಿಷ್ಟ ಪಂಗಡಕ್ಕೆ ಆಗಿರುವ ಅನ್ಯಾಯ. ಇದಕ್ಕೆ ನೇರ ಹೊಣೆಯಾಗಿರುವ ಮುಖ್ಯಮಂತ್ರಿಯವರಿಗೆ ಇನ್ನು ಧ್ವನಿಯೇ ಬಂದಿಲ್ಲ. ಎಲ್ಲಿ ಧ್ವನಿ ಅಡಗಿ ಹೋಗಿದೆಯೋ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

‘ನಿಗಮದ ಹಣ ತೆಲಂಗಾಣದಲ್ಲಿ ಯಾರ ಖಾತೆಗೆ ಹೋಗಿದೆ? ಫಲಾನುಭವಿ ವ್ಯಕ್ತಿಗಳು ಯಾರು? ಸಚಿವ ನಾಗೇಂದ್ರ ಅವರೇ ಹಣವನ್ನು ನೇರವಾಗಿ ದರೋಡೆ ಮಾಡಿದ್ದಾರೆ. ದಾಖಲಾದ ಎಫ್‌ಐಆರ್‌ನಲ್ಲಿ ಮಂತ್ರಿ ಮತ್ತು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಲ್ಲ. ಕೇವಲ ಬ್ಯಾಂಕ್‌ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸರ್ಕಾರ ಭಂಡತನದಿಂದ ವರ್ತಿಸಿದೆ  ಎಂದು ಆರೋಪಿಸಿದರು.

ಮಾಜಿ ಸಚಿವ ಸಿ.ಟಿ.ರವಿ ಅವರು ಮಾತನಾಡಿ,₹10 ಕೋಟಿಗಿಂತ ಹೆಚ್ಚು ಮೊತ್ತದ ಹಗರಣ ನಡೆದರೆ ಸ್ವಯಂ ಪ್ರೇರಿತವಾಗಿ ಸಿಬಿಐ ತನಿಖೆ ಕೈಗೆತ್ತಿಕೊಳ್ಳಲು ಅವಕಾಶವಿದೆ. ಇದು ₹10 ಲಕ್ಷ ಹಗರಣವಲ್ಲ. ₹187 ಕೋಟಿ ಹಗರಣ. ಬೇರೆ ರಾಜ್ಯಗಳಿಗೂ ಮತ್ತು ಹಲವು ಕಂಪನಿಗಳಿಗೂ ಹಣದ ವರ್ಗಾವಣೆ ಆಗಿದೆ ಎಂಬ ಮಾಹಿತಿ ಇದೆ ಎಂದು ಹೇಳಿದರು.

ರಾಜ್ಯಾದ್ಯಂತ ಇಂದು ರಸ್ತೆ ತಡೆ: ಈ ಹಗರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶನಿವಾರ ಬೆಳಿಗ್ಗೆ ರಾಜ್ಯಾದ್ಯಂತ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ ಎಂದು ಯುವ ಮೋರ್ಚಾ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT