ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಕಲಾಪ: ಬಿಜೆಪಿ ನಾಯಕರ ತಿಕ್ಕಾಟ ಸ್ಫೋಟ

ಅಶೋಕ ಗಮನಕ್ಕೆ ಬಾರದೇ ಮೂರು ಬಾರಿ ಧರಣಿ* ನಾಯಕನಿಗೆ ಇಲ್ಲ ಸಹಮತ
Published 7 ಡಿಸೆಂಬರ್ 2023, 23:30 IST
Last Updated 7 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಳಗಾವಿ: ನಾಯಕತ್ವ ಹಾಗೂ ಪ್ರತಿಷ್ಠೆಗಾಗಿ ಬಿಜೆಪಿ ನಾಯಕರ ಮಧ್ಯೆ ನಡೆಯುತ್ತಿರುವ ಆಂತರಿಕ ತಿಕ್ಕಾಟ, ಗುರುವಾರದ ವಿಧಾನಸಭೆ ಕಲಾಪದ ವೇಳೆ ಬಟಾಬಯಲಾಯಿತು.

ಅಧಿವೇಶನ ನಡೆಯಲು ಕೆಲವೇ ದಿನಗಳ ಮೊದಲು ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರ ನೇಮಕವಾಗಿತ್ತು ಮತ್ತು ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ ಅವರ ಆಯ್ಕೆ ನಡೆದಿತ್ತು. ಇಬ್ಬರೂ ಒಗ್ಗೂಡಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಹೋರಾಟ ಕಟ್ಟಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಾಗಿ ಹೇಳಿದ್ದರು.

ಸೋಮವಾರ (ಡಿ.4) ಕಲಾಪ ಶುರುವಾದ ದಿನವೇ ನಾಯಕರ ಮಧ್ಯೆ ನಡೆಯುತ್ತಿರುವ ಕಿತ್ತಾಟ, ತಮ್ಮ ‘ಸಾಮರ್ಥ್ಯ’ವನ್ನು ಬಿಂಬಿಸಿಕೊಳ್ಳುವ ತವಕದ ಪ್ರದರ್ಶನ ಎದ್ದು ಕಾಣಲಾರಂಭಿಸಿತು. ‘ಶೂನ್ಯವೇಳೆ’ಯಲ್ಲಿ ಕೇಳಲಾದ ಎರಡು ಪ್ರಶ್ನೆಗಳಿಗೆ ಗೃಹ ಸಚಿವ ಜಿ. ಪರಮೇಶ್ವರ ಉತ್ತರ ನೀಡಿದ ಬಳಿಕ, ಸದನದೊಳಗೆ ಬಿಜೆಪಿ ಸದಸ್ಯರು ವರ್ತಿಸಿದ ರೀತಿ, ವಿರೋಧ ಪಕ್ಷದ ಮೊಗಸಾಲೆಯಲ್ಲಿ ಪ್ರಯೋಗಿಸಿದ ಬೈಗುಳ, ದಿಕ್ಕು ತೋಚದಂತೆ ನಿಂತ ಹಿರಿ–ಕಿರಿಯ ಶಾಸಕರ ನಡೆ, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿತು.

ಬಿಜೆಪಿಯ ಎಸ್.ಆರ್. ವಿಶ್ವನಾಥ್‌ ಅವರು ತಮ್ಮ ನಾಯಕ ಅಶೋಕ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿ ಕೂಗಾಡಿದರು. ಅಶೋಕ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡರೂ, ಮುಖ ಕಳಾಹೀನವಾಗಿತ್ತು.

ಬಿಜೆಪಿ ಮುಖಂಡ ಹಾಗೂ ರಮೇಶ ಜಾರಕಿಹೊಳಿ ಆಪ್ತ ಪೃಥ್ವಿಸಿಂಗ್‌ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಮ್ಮ, ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತಿತರರು ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಬುಧವಾರ ಶೂನ್ಯವೇಳೆಯಲ್ಲಿ ಆರೋಪಿಸಿದ್ದ ಬಿ.ವೈ. ವಿಜಯೇಂದ್ರ, ಯಾರನ್ನೂ ಬಂಧಿಸದಿರುವುದನ್ನೂ ಪ್ರಶ್ನಿಸಿದ್ದರು. ಬೆಳಗಾವಿ ಪಾಲಿಕೆ ಸದಸ್ಯ ಅಭಿಜಿತ ಜವಳಕರ್ ಮೇಲೆ ರಮೇಶ ಪಾಟೀಲ ಮತ್ತಿತರು ಹಲ್ಲೆ ನಡೆಸಿದ ಪ್ರಕರಣದಲ್ಲಿ, ಜವಳಕರ್ ಅವರನ್ನೇ ಬಂಧಿಸಿದ್ದನ್ನು ಆರ್. ಅಶೋಕ, ಅಭಯ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ ಅವರು ಶೂನ್ಯವೇಳೆಯಲ್ಲಿ ಪ್ರಶ್ನಿಸಿದ್ದರು. 

ಚನ್ನರಾಜ ಮೇಲಿನ ಆರೋಪಕ್ಕೆ ಸಂಬಂಧಿಸಿ ಸರ್ಕಾರ ಕೂಡಲೇ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದ ವಿಜಯೇಂದ್ರ, ಆಡಳಿತ–ವಿರೋಧ ಪಕ್ಷದ ಸದಸ್ಯರ ವಾಗ್ವಾದದ ಮಧ್ಯೆಯೇ ಏಕಾಏಕಿ ಸಭಾಧ್ಯಕ್ಷರ ಪೀಠದ ಎದುರು ಧರಣಿಗೆ ನುಗ್ಗಿದ್ದರು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರಿಗೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗದೇ ಕಕ್ಕಾಬಿಕ್ಕಿಯಾಗಿದ್ದರು. ಗುರುವಾರ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಟ್ಟ ಬಳಿಕ ಧರಣಿ ವಾಪಸ್ ಪಡೆಯಲಾಗಿತ್ತು. 

ಶೂನ್ಯವೇಳೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಅವರು, ಪೃಥ್ವಿಸಿಂಗ್ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಅಭಿಜಿತ್ ಜವಳಕರ ಪ್ರಕರಣದಲ್ಲಿ, ಮೊದಲ ಆರೋಪಿ ರಮೇಶ ಪಾಟೀಲ ಸೇರಿ 8–10 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ರಮೇಶರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

‘ಈ ಎರಡೂ ಪ್ರಕರಣದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಪೃಥ್ವಿಸಿಂಗ್‌ಗೆ ಆಯುಧಗಳಿಂದ ಇರಿದಿದ್ದರೂ ಆರೋಪಿಯನ್ನು ಬಂಧಿಸಿಲ್ಲ. ಪಾಲಿಕೆ ಸದಸ್ಯ ಅಭಿಜಿತ್ ಅವರ ಮೇಲೆ ಹಲ್ಲೆ ನಡೆದಿದ್ದರೂ ಅವರನ್ನ ಬಂಧಿಸಲಾಗಿದೆ. ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕ್ರಮ ಜರುಗಿಸಲಾಗುತ್ತಿದೆ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ ರಿಪಬ್ಲಿಕ್ ಜಾರಿಯಲ್ಲಿದೆ’ ಎಂದೆಲ್ಲ ಬಿಜೆಪಿ ಸದಸ್ಯರು ಹರಿಹಾಯ್ದರು.

ಈ ವೇಳೆ, ತಮ್ಮ ಪಕ್ಷದ ಸದಸ್ಯರನ್ನು ಧರಣಿಗೆ ಹುರಿದುಂಬಿಸಿದ ವಿಜಯೇಂದ್ರ, ಅಶೋಕ ಬಳಿ ಹೋಗಿ ಅವರಲ್ಲಿ ಕಿವಿಯಲ್ಲಿ ಏನೋ ಉಸುರಿಸಿದರು. ಅಶೋಕ ಮಾತನಾಡಲು ಆರಂಭಿಸುತ್ತಿದ್ದಂತೆ ಬಿಜೆಪಿಯ ಬಹುತೇಕ ಸದಸ್ಯರು, ಸಭಾಧ್ಯಕ್ಷರ ಪೀಠದತ್ತ ಧಾವಿಸಿದ್ದರು. ಎಲ್ಲರನ್ನೂ ವಾಪಸ್ ಹೋಗುವಂತೆ ಸೂಚಿಸಿದ ಅಶೋಕ, ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಜವಳಕರ್ ಅವರನ್ನು ಪೊಲೀಸರು ಬಂಧಿಸಿಕೊಂಡು ಹೋಗಿದ್ದಾರೆ. ಆಯುಧದಲ್ಲಿ ಇರಿದಿದ್ದರೂ ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಪಾಲಿಕೆ ಸದಸ್ಯರಿಗೆ ಹೀಗಾದರೆ ಜನರಿಗೆ ರಕ್ಷಣೆ ಹೇಗೆ? ಸರ್ಕಾರದ ನಿಲುವನ್ನು ವಿರೋಧಿಸಿ ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಹೊರಟರು.

ಧರಣಿ ನಡೆಸಲು ತಯಾರಾಗಿ ತಮ್ಮ ಆಸನದ ಎದುರು ನಿಂತಿದ್ದ ಬಿಜೆಪಿ ಸದಸ್ಯರ ಪೈಕಿ ಕೆಲವರು ಸದನದಿಂದ ಹೊರನಡೆದರು. ವಿಜಯೇಂದ್ರ ಸುತ್ತ ಗುಂಪುಗೂಡಿದ ಮತ್ತೆ ಕೆಲವು ಸದಸ್ಯರು, ಯಾವ ದಿಕ್ಕಿನೆಡೆಗೆ ಹೋಗುವುದೆಂದು ಕೆಲ ಹೊತ್ತು ಚರ್ಚಿಸುತ್ತಾ ಅಲ್ಲಿಯೇ ನಿಂತರು. ಏತನ್ಮಧ್ಯೆ, ಬೆಳಗಾವಿ ಶಾಸಕ ಅಭಯ ಪಾಟೀಲ, ಜವಳಕರ ಅವರನ್ನು ಬಂಧಿಸಿದ ಪಿಎಸ್ಐ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸುತ್ತಾ ಏಕಾಂಗಿಯಾಗಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು.

ಸಭಾತ್ಯಾಗ ನಡೆಸಿ ಹೊರಹೋಗಿದ್ದ ಕೆಲವರು, ಮತ್ತೆ ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದ್ದ ಅಭಯ ಪಾಟೀಲಗೆ ಬೆಂಬಲ ಸೂಚಿಸಲು ಮುಂದೆ ಹೋಗ ತೊಡಗಿದರು.

ಮಧ್ಯಪ್ರವೇಶಿಸಿದ, ಗೃಹ ಸಚಿವ ಪರಮೇಶ್ವರ ಅವರು ‘ತನಿಖೆ ಹಂತದಲ್ಲಿರುವಾಗ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ತಮ್ಮ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂಬ ಸಹಜ ನೋವು ಅಭಯ ಪಾಟೀಲರಿಗೆ ಇದೆ. ತನಿಖೆ ಮುಗಿದ ಬಳಿಕ, ಸೂಕ್ತ ನ್ಯಾಯ ಕೊಡಿಸುವ ಭರವಸೆಯನ್ನಷ್ಟೇ ನೀಡುವೆ. ಅವರು ಧರಣಿ ವಾಪಸ್ ಪಡೆಯಬೇಕು’ ಎಂದರು. ಅದನ್ನೊಪ್ಪಿದ ಪಾಟೀಲ, ಧರಣಿ ಕೈಬಿಟ್ಟರು.

ಮೂರನೇ ಬಾರಿ ನಡೆ: ವಿರೋಧ ಪಕ್ಷದ ನಾಯಕನ ಗಮನಕ್ಕೆ ತರದೇ ಈ ರೀತಿ ಸದಸ್ಯರು ಏಕಾಏಕಿ ಧರಣಿ ನಡೆಸಿರುವುದು ಇದು ಮೊದಲೇನಲ್ಲ. ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಅವರ ಹಕ್ಕುಚ್ಯುತಿಯಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆ ವಿರೋಧಿಸಿ ಚರ್ಚೆ ನಡೆಯುತ್ತಿತ್ತು. ಆಗ, ಏಕಾಏಕಿ ಸಭಾಧ್ಯಕ್ಷರ ಪೀಠದ ಎದುರು ನುಗ್ಗಿದ್ದ ಕರಾವಳಿ ಭಾಗದ ವಿ.ಸುನಿಲ್ ಕುಮಾರ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮೊದಲಾದವರು ಧರಣಿ ನಡೆಸಿದ್ದರು. ಆಗಲೂ ಏನಾಗುತ್ತದೆ ಎಂಬುದು ಅಶೋಕ ಅವರಿಗೆ ಗೊತ್ತಾಗಿರಲಿಲ್ಲ.

ಬಕೆಟ್ ರಾಜಕೀಯ: ವಿಶ್ವನಾಥ್

ಸಭಾತ್ಯಾಗ ಮಾಡಿ ಅಶೋಕ ಹೊರಬರುತ್ತಿದ್ದಂತೆ ವಿಜಯೇಂದ್ರ ಜತೆ ಧುಮುಗುಡುತ್ತಲೇ ಹೊರಬಂದ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್, ‘ಬಕೆಟ್, ಬಕೆಟ್‌’ ಎಂದು ಹೇಳುತ್ತಲೇ ಇದ್ದರು.

ಮೊದಲೇ ಹೊರಬಂದಿದ್ದ ಅಶೋಕ, ಸಿ.ಸಿ. ಪಾಟೀಲ, ಆರಗ ಜ್ಞಾನೇಂದ್ರ ಮತ್ತಿತರರು ವಿರೋಧ ಪಕ್ಷದ ಮೊಗಸಾಲೆಯ ಕೊಠಡಿಯಲ್ಲಿ ಇದ್ದರು. 

ಬಾಗಿಲಿನಲ್ಲಿ ನಿಂತ ವಿಶ್ವನಾಥ್‌, ‘ಇಂತಹ . . . . ಮಕ್ಕಳನ್ನು ನಾಯಕರಾಗಿ ಮಾಡಿದರೆ ಪಕ್ಷ ಮುಳುಗಿ ಹೋಗದೇ ಇನ್ನೇನಾ ಗುತ್ತದೆ?. ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವರು ಇನ್ನೇನು ಮಾಡುತ್ತಾರೆ’ ಎಂದು ಏರಿದ ಧ್ವನಿಯಲ್ಲಿ ಕೂಗಿದರು.

‘ಹೊಂದಾಣಿಕೆ ರಾಜಕಾರಣ (ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌) ಮಾಡಿಕೊಂಡೇ ಬಂದು ಅಧಿಕಾರ ಹಿಡಿದರು. ಇದಲ್ಲದೇ ಇನ್ನೇನು ಮಾಡಲು ಸಾಧ್ಯ’ ಎಂದು ಎಗರಾಡಿದರು. ಕೆಲವು ಶಾಸಕರು ಅವರನ್ನು ಅಲ್ಲಿಂದ ಕರೆದೊಯ್ದರು. ಕೆಲವು ಶಾಸಕರು ತಮ್ಮ ಪಾಡಿಗೆ ಮೊಗಸಾಲೆಯಲ್ಲಿ ಕುಳಿತರೆ, ಮತ್ತಷ್ಟು ಮಂದಿ ವಿಜಯೇಂದ್ರ ಸುತ್ತ ಕುಳಿತಿದ್ದರು.

‘ವಿಜಯೇಂದ್ರ ಅವರಿಗೆ ಹೋರಾಟವನ್ನು ಸಭಾತ್ಯಾಗಕ್ಕೆ ಸೀಮಿತಗೊಳಿಸುವುದು ಇಷ್ಟವಿರಲಿಲ್ಲ. ಇನ್ನೊಂದು ಹಂತಕ್ಕೆ ಹೋರಾಟ ತೆಗೆದುಕೊಂಡು ಹೋಗಬೇಕು ಎಂಬುದಿತ್ತು’ ಎಂದು ಶಾಸಕರೊಬ್ಬರು ಹೇಳಿದರು.

‘ಸರ್ವಾನುಮತದ ತೀರ್ಮಾನ’

‘ನಿನ್ನೆಯೂ ಇದೇ ವಿಷಯಕ್ಕೆ ಧರಣಿ ಮಾಡಿದ್ದೆವು. ಇವತ್ತು ಮತ್ತೆ ಧರಣಿ ನಡೆಸಿದರೆ ಉತ್ತರ ಕರ್ನಾಟಕದ ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂಬ ವಿಷಯ ಮುಂದಿಟ್ಟು ನಮ್ಮ ಮೇಲೆ ದಾಳಿ ನಡೆಸಲು ಕಾಂಗ್ರೆಸ್‌ಗೆ ಅವಕಾಶ ಕೊಟ್ಟಂತಾ ಗುತ್ತದೆ ಎಂಬ ಕಾರಣಕ್ಕೆ ಸಭಾತ್ಯಾಗ ಮಾಡಲು ಸರ್ವಾನುಮತದ ತೀರ್ಮಾನ ಮಾಡಿದ್ದೆವು’ ಎಂದು ಅಶೋಕ ಹೇಳಿದರು.

‘ತಮ್ಮ ಪಕ್ಷದ ಪಾಲಿಕೆ ಸದಸ್ಯರಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಅಭಯ ಪಾಟೀಲರಿಗೆ ನೋವಾಗಿದೆ. ದಿನವೂ ಧರಣಿ ನಡೆಸುವುದು ಸರಿಯಲ್ಲ ಎಂದು ಎಲ್ಲರೂ ಚರ್ಚಿಸಿಯೇ ನಿರ್ಧಾರ ಕೈಗೊಂಡಿದ್ದೇವೆ. ಇದರಲ್ಲಿ ಭಿನ್ನತೆ ಏನಿಲ್ಲ’ ಎಂದೂ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಆರಗ ಜ್ಞಾನೇಂದ್ರ, ಸಿ.ಸಿ. ಪಾಟೀಲ ಅವರು, ‘ಕಾಂಗ್ರೆಸ್‌ನವರಿಗೆ ಅಧಿಕಾರ ಬಲ ಇದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡುತ್ತಾರೆ. ಇದರಾಚೆಗೆ ಏನೂ ಆಗುತ್ತಿರಲಿಲ್ಲ. ಹೀಗಾಗಿ, ಒಮ್ಮತದಿಂದ ಸಭಾತ್ಯಾಗದ ತೀರ್ಮಾನ ಮಾಡಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT