ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3,668 ಆಸ್ತಿಗಳ ನಗದೀಕರಣಕ್ಕೆ ರಾಜ್ಯ ಪ್ರಸ್ತಾವ

ಸರ್ಕಾರಿ ಜಮೀನು ಖಾಸಗಿಯವರಿಗೆ ಗುತ್ತಿಗೆ: 4 ವರ್ಷದಲ್ಲಿ 6 ಲಕ್ಷ ಕೋಟಿ ಸಂಪನ್ಮೂಲ ಸಂಗ್ರಹಕ್ಕೆ ರಾಜ್ಯದ ಒಲವು
Last Updated 6 ಜುಲೈ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ನಗದೀಕರಣ ಯೋಜನೆ (ಎನ್‌ಎಂಪಿ) ಭಾಗವಾಗಿ ಸುಮಾರು 3,668ಕ್ಕೂ ಹೆಚ್ಚು ಸರ್ಕಾರಿ ಜಮೀನುಗಳು ಮತ್ತು ಇತರ ಆಸ್ತಿಗಳನ್ನು ‘ನಗದೀಕರಣ’ ಮಾಡಿ, ಸಂಪನ್ಮೂಲ ಸಂಗ್ರಹಿಸುವತ್ತ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ.

ಕೃಷಿ ಹಾಗೂ ಪ್ರವಾಸೋದ್ಯಮ ಇಲಾಖೆಗಳು, ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಮತ್ತು ಇತರ ಇಲಾಖೆಗಳು ಹೊಂದಿರುವ ಆಸ್ತಿಗಳನ್ನು ನಗದೀಕರಣ ವ್ಯಾಪ್ತಿಗೆ ತರುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿರುವುದಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ವರ್ಷ ಎನ್‌ಎಂಪಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರದ ಆಸ್ತಿಗಳನ್ನು ಖಾಸಗಿ ವಲಯಕ್ಕೆ ಗುತ್ತಿಗೆ ನೀಡುವ ಮೂಲಕ ನಾಲ್ಕು ವರ್ಷಗಳ ಅವಧಿಯಲ್ಲಿ ₹6 ಲಕ್ಷ ಕೋಟಿ ಸಂಪನ್ಮೂಲ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಮೊತ್ತವನ್ನು ಪ್ರಸ್ತುತ ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಬಳಸಲು ಉದ್ದೇಶಿಸಲಾಗಿದೆ. ಅದೇ ಹಾದಿಯನ್ನು ರಾಜ್ಯದಲ್ಲೂ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಅನುಸರಿಸಲು ಮುಂದಾಗಿದೆ.

‘ನಗದೀಕರಣ’ ಯೋಜನೆ ವ್ಯಾಪ್ತಿಗೆ ತರಬಹುದಾದ ಜಮೀನು ಗಳು, ಕಟ್ಟಡಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕೈಗೊಂಡಿರುವ ಯೋಜನೆಗಳ ವಿವರಗಳನ್ನು ಸಲ್ಲಿಸುವಂತೆ‌ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು (ಐಡಿಡಿ) ಪ್ರಶ್ನಾವಳಿಗಳ ಸಹಿತ ಸುತ್ತೋಲೆಯೊಂದನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಕಳುಹಿಸಿದೆ.

12 ಇಲಾಖೆಗಳು ಈವರೆಗೆ ಅಂತಹ 3,668 ಜಮೀನುಗಳ ವಿವರ ಸಲ್ಲಿಸಿವೆ. ಏಳು ಕಡೆಗಳಲ್ಲಿ ಜಮೀನುಗಳನ್ನು ಹೊಂದಿರುವಕರ್ನಾಟಕ ರಾಜ್ಯ ಕೃಷಿ ಉತ್ಪ‍ನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ (ಕೆಎಪಿಪಿಇಸಿ) ನಗದೀಕರಣದ ಪ್ರಸ್ತಾವ ಮುಂದಿಟ್ಟಿದೆ.

ನೀತಿ ಆಯೋಗದ ಮಾರ್ಗದರ್ಶನ

ನೀತಿ ಆಯೋಗದ ಅಧಿಕಾರಿಗಳು, ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ‘ಆಸ್ತಿ ನಗದೀಕರಣ’ ಕುರಿತು ಮಾರ್ಗದರ್ಶನ ನೀಡಿದ್ದಾರೆ. ರಾಜ್ಯ ಹೆದ್ದಾರಿಗಳು, ನಗರ ಬಸ್‌ ನಿಲ್ದಾಣಗಳು, ಕ್ರೀಡಾ ಸಂಕೀರ್ಣಗಳು, ಸಣ್ಣ ಬಂದರುಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಕರ್ನಾಟಕದಲ್ಲಿ ಪ್ರಮುಖ ಆಸ್ತಿಗಳನ್ನು ನಗದೀಕರಣ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಗುರುತಿಸುವಂತೆ ಸೂಚಿಸಿದ್ದರು.

ಆಸ್ತಿಗಳ ನಗದೀಕರಣದ ಸಂದರ್ಭದಲ್ಲಿ ಈ ಕೆಳಗಿನ ಮಾದರಿಯನ್ನು ಅನುಸರಿಸುವಂತೆ ಸೂಚಿಸಿದ್ದರು.

lಕಾರ್ಯಾಚರಣೆ, ನಿರ್ವಹಣೆ, ವರ್ಗಾವಣೆ (ಒಎಂಟಿ)

lಟೋಲ್‌ ಕಾರ್ಯಾಚರಣೆ ವರ್ಗಾವಣೆ (ಟಿಒಟಿ)

lಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ದಿ (ಒಎಂಡಿ)

lಪುನರ್ವಸತಿ ಕಾರ್ಯಾಚರಣೆ, ನಿರ್ವಹಣೆ ಮತ್ತು ವರ್ಗಾವಣೆ (ಆರ್‌ಒಎಂಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT