ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಜೆಡಿಎಸ್‌ನಿಂದ ಯಾರಿಗೂ ಬೆಂಬಲವಿಲ್ಲ

ಮುಖಂಡ ವೆಂಕಟರಾವ್ ನಾಡಗೌಡರ ಹೇಳಿಕೆ
Last Updated 1 ಡಿಸೆಂಬರ್ 2019, 11:17 IST
ಅಕ್ಷರ ಗಾತ್ರ

ಅಥಣಿ: ‘ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲ ಹಳದಮಳ ತಾವು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಆದರೆ, ಪಕ್ಷದಿಂದ ನಾವು ಯಾವುದೇ ಪಕ್ಷೇತರ ಅಭ್ಯರ್ಥಿಗೂ ಬೆಂಬಲ ನೀಡಿಲ್ಲ’ ಎಂದು ಜೆಡಿಎಸ್ ಮುಖಂಡ ವೆಂಕಟರಾವ್ ನಾಡಗೌಡರ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯ ಲಾಭ ಪಡೆಯಲು ನಮ್ಮ ಪಕ್ಷದ ನಾಯಕರ ಭಾವಚಿತ್ರ ಬಳಸಿಕೊಂಡಿರುವ ಹಾಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಹಳ್ಳದಮಳ ಅವರನ್ನು ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಶ್ರೀಶೈಲ ಪಕ್ಷದ ಟಿಕೆಟ್ ಕೇಳಿದ್ದರು. ಆದರೆ, ಸಿಕ್ಕಿಲ್ಲ. ಕಣದಲ್ಲಿ ನಮ್ಮ ಅಭ್ಯರ್ಥಿ ಇಲ್ಲ. ನಾವು ನೈತಿಕ ಬೆಂಬಲ ಘೋಷಿಸದಿಲ್ಲರೂ ನಮ್ಮ ಗಮನಕ್ಕೆ ತರದೇ ಜೆಡಿಎಸ್ ಬೆಂಬಲಿತ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ, ಇದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಪಕ್ಷದ ಹಿರಿಯ ವರಿಷ್ಠರ ಸಲಹೆಯಂತೆ ಗುರಪ್ಪ ದಾಶ್ಯಾಳ ಅವರಿಗೆ ಟಿಕೆಟ್‌ ಕೊಡಲಾಗಿತ್ತು. ಅವರಿಗೆ ಒತ್ತಡ ಹಾಕಿದ ಉ‍ಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನಾಮಪತ್ರ ವಾಪಸ್ ತೆಗೆಸಿದ್ದಾರೆ’ ಎಂದು ದೂರಿದರು.

ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರೆಡ್ಡಿ, ‘ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಗೊಂದಲಗಳು ಉಂಟಾಗಿ ಎಚ್‌.ಡಿ. ಕುಮಾರಸ್ವಾಮಿ ಅವರು ಅಧಿಕಾರ ಬಿಡಬೇಕಾಯಿತು. ಸದ್ಯ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಉಪಚುನಾವಣೆಯಲ್ಲಿ ಕನಿಷ್ಠ 8 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಹೊರಟಿದ್ದಾರೆ. ಅನರ್ಹ ಶಾಸಕರಿಗೆ ಜನತಾ ನ್ಯಾಯಾಲಯದಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

‘ಈ ಬಾರಿ ನಮ್ಮ ಅಭ್ಯರ್ಥಿ ಇಲ್ಲದಿರಬಹುದು. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಲಿದ್ದೇವೆ. ಅಥಣಿ ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಗೊಂದಲಗಳನ್ನು ಬಗೆಹರಿಸಿ ನೂತನ ಅಧ್ಯಕ್ಷರನ್ನಾಗಿ ಅಣ್ಣಾರಾಯ ಹಾಲಳ್ಳಿ ಅವರನ್ನು ನೇಮಕ ಮಾಡಲಾಗಿದೆ’ ಎಂದು ತಿಳಿಸಿದರು.

ಅಧಿಕಾರ ಹಸ್ತಾಂತರ:

ನೂತನ ಅಧ್ಯಕ್ಷ ಅಣ್ಣಾರಾಯ ಹಾಲಳ್ಳಿ ಅವರಿಗೆ ಎನ್.ಎಚ್. ಕೋನರೆಡ್ಡಿ ಅವರು ಪಕ್ಷದ ಧ್ವಜ ಮತ್ತು ಆದೇಶಪತ್ರ ನೀಡಿ ಅಧಿಕಾರ ಹಸ್ತಾಂತರಿಸಿದರು.

‘ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಎಲ್ಲರನ್ನೂ ವಿಶ್ವಾಸ ತೆಗೆದುಕೊಂಡು ಸಂಘಟನೆ ಬಲಪಡಿಸಲು ಶ್ರಮಿಸುತ್ತೇನೆ. ಅಥಣಿಯಲ್ಲಿ ಈ ಬಾರಿ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದೇನೆ’ ಎಂದು ಅಣ್ಣಾರಾಯ ಹೇಳಿದರು.

‘ಕಾಗವಾಡ ಅಭ್ಯರ್ಥಿ ಶ್ರೀಶೈಲ ಪರವಾಗಿ ಪ್ರಚಾರ ಮಾಡುತ್ತೇವೆ. ‌ನ. 30ರಂದು ಎಚ್.ಡಿ. ಕುಮಾರಸ್ವಾಮಿ ಕಾಗವಾಡದಲ್ಲಿ ಪ್ರಚಾರ ನಡೆಸಲಿದ್ದಾರೆ’ ಎಂದು ತಿಳಿಸಿದರು.

ಪಕ್ಷದ ಕಾಗವಾಡ ತಾಲ್ಲೂಕು ಘಟಕದ ಅಧ್ಯಕ್ಷ ಕಲ್ಲಪ್ಪ ಮಗೆಣ್ಣನವರ, ಕಾಗವಾಡ ಅಭ್ಯರ್ಥಿ ಶ್ರೀಶೈಲ ತೂಗಶೆಟ್ಟಿ, ಮುಖಂಡರಾದ ಬಿ.ಆರ್.ಪಾ ಟೀಲ, ರಾಜೇಂದ್ರ ಐಹೊಳೆ, ಅಯಾಜ್ ಮಾಸ್ಟರ್, ಗಿರೀಶ ಬುಟಾಳಿ, ಲಕ್ಕಪ್ಪ ಮುಡಸಿ, ಶಿವಾನಂದ ಐಗಳಿ, ರವಿ ಹಂಜಿ, ಮುರುಗೇಶ ನಾಯಿಕ, ಜಗದೀಶ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT