ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆ ಹ್ಯೂಬ್ಲೋಟ್ ವಾಚ್‌, ಪಂಚೆಯೊಳಗೆ ಖಾಕಿ ಚಡ್ಡಿ : ಹರಿಪ್ರಸಾದ್‌ ವಾಗ್ದಾಳಿ

Published 9 ಸೆಪ್ಟೆಂಬರ್ 2023, 11:15 IST
Last Updated 9 ಸೆಪ್ಟೆಂಬರ್ 2023, 11:15 IST
ಅಕ್ಷರ ಗಾತ್ರ

ಬೆಂಗಳೂರು: ‘ಹ್ಯೂಬ್ಲೋ ವಾಚ್‌ ಕಟ್ಟಿಕೊಂಡು, ಪಂಚೆ ಉಟ್ಟುಕೊಂಡು ಒಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ’ ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಈಡಿಗ ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆ ಹರಿಪ್ರಸಾದ್‌ ಅವರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರು ಹೇಳದೆಯೇ ಭಾಷಣದುದ್ದಕ್ಕೂ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಈಡಿಗ, ಬಂಜಾರ, ಛಲವಾದಿ, ಕುಂಬಾರ, ಕೊರಚ, ಮೇದಾರ, ಪಿಂಜಾರ, ವಿಶ್ವಕರ್ಮ, ಕೋಲಿ ಸೇರಿದಂತೆ ಹಿಂದುಳಿದ, ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರು ಮತ್ತು ಮುಖಂಡರು ವೇದಿಕೆಯಲ್ಲಿದ್ದರು. ಈ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸುವಂತೆ ಹರಿಪ್ರಸಾದ್ ಆಗ್ರಹಿಸಿದರು.

‘ಬಿಜೆಪಿ ಬಾಗಿಲು ಬಡಿದಿರಲಿಲ್ಲ’: ‘ನಾನು ಅಧಿಕಾರ ಸಿಕ್ಕಿಲ್ಲ ಎಂದು ಅಡ್ವಾಣಿ ಅವರನ್ನು ಭೇಟಿ ಮಾಡಿ, ಅವರ ಮನೆಯಲ್ಲಿ ಉಪಾಹಾರ ಸ್ವೀಕರಿಸಿ ಬಿಜೆಪಿ ಸೇರಲು ಹೋಗಿರಲಿಲ್ಲ. ಯಾರು ಹೋಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದ್ದ ವೆಂಕಯ್ಯ ನಾಯ್ಡು, ಅರವಿಂದ ಲಿಂಬಾವಳಿ ಈಗಲೂ ಇದ್ದಾರೆ’ ಎಂದು ಹೇಳಿದರು.

ದೀರ್ಘಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದರು. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಅವರಿಗಿದೆ. ಆದರೆ, ಈ ಬಾರಿ ಮುಖ್ಯಮಂತ್ರಿ ಸ್ಥಾನ ಬಿಡಿ, ಉಪ ಮುಖ್ಯಮಂತ್ರಿ ಸ್ಥಾನವನ್ನೂ ನೀಡದೇ ಹಿಂಬಡ್ತಿ ನೀಡಿರುವುದು ತಲೆ ತಗ್ಗಿಸುವ ವಿಚಾರ. ಆದಿವಾಸಿ ಸಮುದಾಯದ ಸತೀಶ ಜಾರಕಿಹೊಳಿಯನ್ನು ಉಪ ಮುಖ್ಯಮಂತ್ರಿ ಮಾಡಬಹುದಿತ್ತು. ಅಲ್ಪಸಂಖ್ಯಾತರನ್ನು ಉಪಮುಖ್ಯಮಂತ್ರಿ ಮಾಡಬಹುದಿತ್ತು, ಮಾಡಿಲ್ಲ. ಅರ್ಹತೆ ಇರುವವರಿಗೆ ಅಧಿಕಾರ ನೀಡುತ್ತಿಲ್ಲ ಎಂದು ಟೀಕಿಸಿದರು.

‘ನನಗೆ ಅಧಿಕಾರ ಸಿಕ್ಕಿದೆ. ಇಷ್ಟ ಬಂದ ಹಾಗೇ ಮಾಡ್ತೀನಿ ಅಂದ್ರೆ ಜನ ತೀರ್ಮಾನ ಮಾಡುತ್ತಾರೆ. ಮಾತು ಮಾತಿಗೆ ದೇವರಾಜ ಅರಸು ಎಂದು ಹೇಳಿದರೆ ಆಗುವುದಿಲ್ಲ. ಅರಸು ಅವರ ಕಾರಿನಲ್ಲಿ ಕುಳಿತ ಮಾತ್ರಕ್ಕೆ ಅರಸು ಆಗಲು ಸಾಧ್ಯವಿಲ್ಲ. ಅರಸು ಅವರ ರೀತಿ ಸಣ್ಣ ಸಮುದಾಯಗಳ ಕೈ ಹಿಡಿಯುವ ಕೆಲಸ ಮಾಡಬೇಕು. ಅರಸು ಅವರ ಚಿಂತನೆಗಳನ್ನು, ವಿಚಾರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಹಿಂದುಳಿದವರು, ಅತಿ ಹಿಂದುಳಿದವರಿಗೆ ಚುನಾವಣೆಗೆ ಮೊದಲು ಹತ್ತಾರು ಭರವಸೆ ನೀಡುತ್ತಾರೆ. ನಂತರ ಎಲ್ಲವೂ ಮರೆತು ಹೋಗುತ್ತದೆ. ನಮ್ಮ ಪಕ್ಷದವರೇ ಇರಲಿ, ಬೇರೆ ಪಕ್ಷದವರೇ ಇರಲಿ, ಹಿಂದುಳಿದವರ ಹಿತಾಸಕ್ತಿ ರಕ್ಷಿಸದಿದ್ದರೆ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

ಸಭೆ ಉದ್ಘಾಟಿಸಿದ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಇಲಿಗಳು ಸಂಘ ಕಟ್ಟಿದಾಗ ನಾಯಕ ಯಾರು ಎಂಬ ಚರ್ಚೆಯಾಗಿ ಎರಡು ಗುಂಪುಗಳಾದವು. ಒಂದು ಗುಂಪಿಗೆ ಹಾವು, ಇನ್ನೊಂದು ಗುಂಪಿಗೆ ಬೆಕ್ಕು ನಾಯಕರಾದರು. ಪರಸ್ಪರ ಅವು ಬೈದುಕೊಳ್ಳುತ್ತಲೇ ಒಳ ಒಪ್ಪಂದ ಮಾಡಿಕೊಂಡು ಇಲಿಗಳನ್ನು ತಿಂದು ಮುಗಿಸಿದವು. ಹಿಂದುಳಿದ ವರ್ಗದವರ ಸಂಘಟನೆಯ ಕಥೆ ಹೀಗಾಗಬಾರದು. ಕಲ್ಲು, ಮರಳು, ಸಿಮೆಂಟ್‌, ನೀರು ಬೇರೆ ಬೇರೆಯಾದರೆ ಕಾಂಕ್ರೀಟ್‌ ಆಗುವುದಿಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಒಂದಾದರೆ ಮಾತ್ರ ಕಾಂಕ್ರೀಟ್‌ನಂತೆ ಗಟ್ಟಿಯಾಗಿರಲು ಸಾಧ್ಯ’ ಎಂದು ಹೇಳಿದರು.

ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಚ್‌.ಆರ್‌. ಶ್ರೀನಾಥ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌, ಎಎಪಿ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ದೇವರಾಜ ಅರಸು ಅವರ ಮೊಮ್ಮಗ ಸೂರಜ್‌ ಹೆಗ್ಡೆ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌. ದ್ವಾರಕಾನಾಥ್‌, ವಿವಿಧ ಸಮುದಾಯಗಳ ಸ್ವಾಮೀಜಿಗಳು, ಮುಖಂಡರು ಮಾತನಾಡಿದರು.

ಸಚಿವ ಸ್ಥಾನ ನೀಡದೇ ಇರುವುದಕ್ಕೆ ಧನ್ಯವಾದ
‘ನನಗೆ ಸಚಿವ ಸ್ಥಾನ ನೀಡದೇ ಇದ್ದಾಗ ಮುಖ್ಯಮಂತ್ರಿಯವರಿಗೆ ಬಿಜೆಪಿಯವರು ಅಭಿನಂದನೆ ಸಲ್ಲಿಸಿದರು. ನಾನು ಕೂಡ ಮುಖ್ಯಮಂತ್ರಿಯವರಿಗೆ ಅದೇ ಕಾರಣಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಯಾಕೆಂದರೆ, ನನಗೆ ಮಂತ್ರಿ ಸ್ಥಾನ ನೀಡಿದ್ದರೆ, ಅತಿ ಹಿಂದುಳಿದ ವರ್ಗದವರನ್ನು ಭೇಟಿಯಾಗಲು ಆಗುತ್ತಿರಲಿಲ್ಲ. ಧ್ವನಿ ಇಲ್ಲದವರ ಧ್ವನಿಯಾಗಿ, ಶಕ್ತಿ ಇಲ್ಲದವರ ಶಕ್ತಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ’ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದರು.

ವಿವಿಧ ಸಮುದಾಯದ 20ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿ

ಸೋಲೂರು ಈಡಿಗ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಕುಂಬಾರ ಗುರು ಪೀಠದ ಕುಂಬಾರ ಗುಂಡಯ್ಯ ಸ್ವಾಮೀಜಿ ಕೊರಚ ಗುರುಪೀಠದ ನುಲಿಯ ಚಂದಯ್ಯ ಸ್ವಾಮೀಜಿ ಮೇದಾರ ಗುರುಪೀಠದ ಇಮ್ಮಡಿ ಬಸವ ಸ್ವಾಮೀಜಿ ಸರ್ವಧರ್ಮ ಸಮನ್ವಯ ಪೀಠದ ಬಸವ ಸಂಗಮಾನಂದ ಸ್ವಾಮೀಜಿ ವಿಶ್ವಕರ್ಮ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ ‌ನಿಟ್ಟರಹಳ್ಳಿ ಮಠದ ನೀಲಕಂಠಾಚಾರ್ಯ ಸ್ವಾಮೀಜಿ ಕೋಲಿ ಗುರುಪೀಠದ ವರಲಿಂಗೇಶ್ವರ ಸ್ವಾಮೀಜಿ ಮೈಸೂರಿನ ನಾಗಲಿಂಗ ಸ್ವಾಮೀಜಿ ತುಮಕೂರಿನ ರಘುರಾಮ ಸ್ವಾಮೀಜಿ ಸಹಿತ ವಿವಿಧ ಸಮುದಾಯಗಳ ಸ್ವಾಮೀಜಿಗಳಿದ್ದರು.

ಸಭೆಯ ಹಕ್ಕೊತ್ತಾಯಗಳು ಈ ಸಭೆಯಲ್ಲಿ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಅದರಲ್ಲಿ ಕೆಲವು ಇಲ್ಲಿವೆ:

* ಜನಸಂಖ್ಯೆಗೆ ಅನುಗುಣವಾಗಿ ವಿಧಾನಸಭೆ ವಿಧಾನ ಪರಿಷತ್‌ ಲೋಕಸಭೆ ರಾಜ್ಯಸಭೆಯಲ್ಲಿ ಅತಿ ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯ ನೀಡಬೇಕು 

* ಹಿಂದುಳಿದ ವರ್ಗಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ ಅತಿ ಹಿಂದುಳಿದವರನ್ನು ಪ್ರತ್ಯೇಕಿಸಬೇಕು

* ಅತ್ಯಂತ ಹಿಂದುಳಿದ 73 ಜಾತಿಗಳನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು

* ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ತಿರಸ್ಕರಿಸಬೇಕು

* ಎಚ್‌. ಕಾಂತರಾಜು ವರದಿಯನ್ನು ಸ್ವೀಕರಿಸಿ ಜಾರಿ ಮಾಡಬೇಕು

* ಸಾರಾಯಿ ಮಾರಾಟ ನಿಷೇಧದಿಂದ ಉದ್ಯೋಗ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಬೇಕು. ತಲಾ 2 ಎಕರೆ ಜಮೀನು ಮಂಜೂರು ಮಾಡಬೇಕು. ಆಯಾ ಕುಲಕಸುಬು ಕಳೆದುಕೊಂಡ ಬೇರೆ ಸಮುದಾಯಗಳ ಜನರಿಗೂ ತಲಾ 2 ಎಕರೆ ಜಮೀನು ನೀಡಬೇಕು

ನಾನು ವಿಧಾನಪರಿಷತ್ತಿನಲ್ಲಿ ಸಭಾ ನಾಯಕನಾಗಿದ್ದಾಗ ಹರಿಪ್ರಸಾದ್‌ ವಿರೋಧ ಪಕ್ಷದ ನಾಯಕ ಆಗಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಅವರು ಸಭಾ ನಾಯಕರಾಗುತ್ತಾರೆ ಎಂದು ನಾನು ಭಾವಿಸಿದ್ದೆ
-ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯ
ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯದವರು ರಾಜಕೀಯ ಅಧಿಕಾರವನ್ನು ಹಿಡಿದು ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವ ಕಾರ್ಯ ಮಾಡಬೇಕು
-ಜೋಗಿ ರಮೇಶ್‌, ಆಂಧ್ರ ಪ್ರದೇಶದ ವಸತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT