ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಂಕ್‌ಗೆ ಪಾಸ್‌ಪೋರ್ಟ್‌ ವಶದಲ್ಲಿರಿಸಿಕೊಳ್ಳುವ ಅಧಿಕಾರವಿಲ್ಲ: ಹೈಕೋರ್ಟ್

Published 17 ಜನವರಿ 2024, 16:35 IST
Last Updated 17 ಜನವರಿ 2024, 16:35 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದೇಶಿ ಪೌರತ್ವ ಹೊಂದಿರುವವರ ಪಾಸ್‌ಪೋರ್ಟ್‌ ಮತ್ತು ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‌ ಅನ್ನು ವಶಕ್ಕೆ ಪಡೆಯಲು ಬ್ಯಾಂಕ್‌ಗೆ ಅಧಿಕಾರ ಇಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ತಮ್ಮ ಪಾಸ್‌ಪೋರ್ಟ್‌ ಮತ್ತು ಒಸಿಐ ಕಾರ್ಡ್‌ ಅನ್ನು ವಶಕ್ಕೆ ಪಡೆದಿದ್ದ ಬ್ಯಾಂಕ್‌ನ ಕ್ರಮವನ್ನು ಪ್ರಶ್ನಿಸಿ ಯುಕೆ (ಯುನೈಟೆಡ್‌ ಕಿಂಗ್ಡಮ್‌) ಪೌರತ್ವ ಹೊಂದಿರುವ ಕೋಶಿ ವರ್ಗೀಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರು ಬ್ಯಾಂಕ್ ಅಧಿಕಾರಿಗಳಿಗೆ ತಮ್ಮ ಠೇವಣಿ ಬದಲು ಒಸಿಐ ಕಾರ್ಡ್ ಮತ್ತು ಪಾಸ್‌ಪೋರ್ಟ್‌ ನೀಡಿದ್ದಾರೆ. ಬ್ಯಾಂಕ್ 15 ದಿನಗಳಿಗಿಂತಲೂ ಹೆಚ್ಚು ಕಾಲ ಇದನ್ನು ತನ್ನ ವಶದಲ್ಲಿಟ್ಟುಕೊಳ್ಳಲು ಅವಕಾಶವಿಲ್ಲ. ಹೀಗಾಗಿ, 2022ರ ಅಕ್ಟೋಬರ್ 17ರಿಂದ ವಶದಲ್ಲಿಟ್ಟುಕೊಂಡಿರುವ ಅರ್ಜಿದಾರರ ಬ್ರಿಟಿಷ್ ಪಾಸ್‌ಪೋರ್ಟ್‌ ಮತ್ತು ಒಸಿಐ ಕಾರ್ಡ್‌ ಅನ್ನು ಹಿಂದಿರುಗಿಸಬೇಕು’ ಎಂದು ನ್ಯಾಯಪೀಠ ಪ್ರತಿವಾದಿ ಬ್ಯಾಂಕ್‌ಗೆ ನಿರ್ದೇಶಿಸಿದೆ.

ಪ್ರಕರಣವೇನು?: ರಿಯಲ್‌ ಎಸ್ಟೇಟ್‌ ವ್ಯವಹಾರವೊಂದರಲ್ಲಿ ಅರ್ಜಿದಾರ ಕೋಶಿ ವರ್ಗೀಸ್ ₹5.6 ಕೋಟಿ ಮೊತ್ತದ ಎರಡು ಗೃಹ ಸಾಲಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಖಾತರಿಯ ಜವಾಬ್ದಾರಿ ವಹಿಸಿಕೊಂಡಿದ್ದರು. ಇದನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್‌ ಅರ್ಜಿದಾರರ ಪಾಸ್‌ಪೋರ್ಟ್‌ ಮತ್ತು ಒಸಿಐ ಕಾರ್ಡ್‌ ಅನ್ನು ವಶಕ್ಕೆ ಪಡೆದಿತ್ತು. ‘ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ, ಬ್ಯಾಂಕ್ ನನ್ನ ಪಾಸ್‌ಪೋರ್ಟ್‌ ವಶಕ್ಕೆ ಪಡೆದಿದೆ’ ಎಂದು ಆರೋಪಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT