ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರ ನಂತರ ಬಿಜೆಪಿಯಿಂದ ಕಾವೇರಿ ಯಾತ್ರೆ: ಬೊಮ್ಮಾಯಿ

Published 8 ಸೆಪ್ಟೆಂಬರ್ 2023, 14:06 IST
Last Updated 8 ಸೆಪ್ಟೆಂಬರ್ 2023, 14:06 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಕುಡಿಯುವ ನೀರಿಗೂ ತೊಂದರೆ ಇರುವಾಗ ತಮಿಳುನಾಡಿಗೆ ನೀರು ಹರಿಸಿ ಜನರಿಗೆ ದ್ರೋಹ ಬಗೆದಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿಯಿಂದ ಇದೇ 12ರ ನಂತರ ಕಾವೇರಿ ಕೊಳ್ಳದಲ್ಲಿ ಕಾವೇರಿ ಯಾತ್ರೆ ನಡೆಸಲಾಗುವುದು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಜೆಪಿ ನಿಯೋಗದೊಂದಿಗೆ ಶುಕ್ರವಾರ ಕೆಆರ್‌ಎಸ್‌ ಜಲಾಶಯ ವೀಕ್ಷಿಸಿದ ‌ಅವರು, ‘ನ್ಯಾಯಾಲಯ ಆದೇಶಿಸ‌ದಿದ್ದರೂ ತಮಿಳುನಾಡಿಗೆ ನೀರು ಹರಿಸಿ ರಾಜ್ಯದಲ್ಲಿ ಕೃತಕ ಬರ ಸೃಷ್ಟಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ವಾಸ್ತವ ಸಂಗತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಸ್ಥಿತಿ ನಿಭಾಯಿಸಲು ವಿಫಲರಾಗಿರುವ ಸಚಿವ ಡಿ.ಕೆ. ಶಿವಕುಮಾರ್‌ ರೈತರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘12ರ ನಂತರ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿರುವ ಸರ್ಕಾರ ಆ ನಿಲುವಿಗೇ ಬದ್ಧವಾ‌ಗದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಸಂಸದರಿಗೂ ಸೂಚಿಸಲಾಗಿದೆ. ಸಂಕಷ್ಟ ಸೂತ್ರ ರಚನೆ, ಮೇಕೆದಾಟು ಯೋಜನೆ ಜಾರಿಗೂ ಹೋರಾಟ ನಡೆಯಲಿದೆ’ ಎಂದರು.

‘ಕಾವೇರಿ ಕೊಳ್ಳದ ಜಲಾಶಯಗಳ ನಿರ್ವಹಣೆಯಲ್ಲಿ ಸರ್ಕಾರ ಜವಾಬ್ದಾರಿ ಮರೆತಿದೆ. ಜೂನ್‌ ತಿಂಗಳಲ್ಲೇ ಮಳೆ ಕೊರತೆಯ ಮಾಹಿತಿ ಇದ್ದರೂ ಕೆರೆ, ಕಟ್ಟೆ ತುಂಬಿಸಿಲ್ಲ. ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿಸಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ನೀರು ಬಿಟ್ಟಿದ್ದರೆ ಹೆಚ್ಚಿನ ನೀರು ಉಳಿಸಬಹುದಿತ್ತು. ವಾಸ್ತವಾಂಶ ಮರೆಮಾಚಿ ನೀರು ಹರಿಸಲಾಗಿದೆ’ ಎಂದರು.

‘ತಮಿಳುನಾಡಿನಲ್ಲಿ ವಾಸ್ತವವಾಗಿ 1.8 ಲಕ್ಷ ಎಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆಯಬೇಕು, ಆದರೆ ಅನಧಿಕೃತವಾಗಿ 4 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲಾಗಿದೆ. ಈ ವಾಸ್ತವಾಂಶವನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ಸೋತಿದೆ. ಕೆಆರ್‌ಎಸ್‌ ಜಲಾಶಯದಲ್ಲಿ ನೀರು ತಗ್ಗಿರುವುದನ್ನು ನೋಡಿದರೆ ಹೊಟ್ಟೆ ಉರಿಯುತ್ತಿದೆ’ ಎಂದರು.

ನಿಯೋಗದಲ್ಲಿ ಗೋವಿಂದ ಕಾರಜೋಳ, ಸಂಸದರಾದ ಸುಮಲತಾ ಅಂಬರೀಶ್‌, ಪ್ರತಾಪ್‌ಸಿಂಹ, ಶಾಸಕ ಶ್ರೀವತ್ಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT