ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರಿಗೆ ಪರಿಹಾರ ನೀಡಲು ಕುಂಟು ನೆಪ: ಬೊಮ್ಮಾಯಿ ಟೀಕೆ

Published 4 ಜನವರಿ 2024, 14:26 IST
Last Updated 4 ಜನವರಿ 2024, 14:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಎಲ್ಲ ರೈತರಿಗೂ ಬರ ಪರಿಹಾರ ನೀಡಲು ಆಧಾರ್‌ ಸಂಖ್ಯೆ ಜೋಡಣೆಯ ಕುಂಟು ನೆಪ ಹೇಳದೇ, ರೈತರ ಖಾತೆಗಳಿಗೆ ತಕ್ಷಣವೇ ₹2,000 ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ 69 ಲಕ್ಷ ರೈತರ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಆರ್ಥಿಕ ಸ್ಥಿತಿ ಮರೆ ಮಾಚಲು ತಾಂತ್ರಿಕ ನೆಪ ಹೇಳುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಬಹುತೇಕ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಆಗಿವೆ. ಮುಂಗಾರು, ಹಿಂಗಾರು ವಿಫಲವಾಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಕಾಮಗಾರಿಗಳನ್ನೂ ಆರಂಭಿಸಿಲ್ಲ. ಆರು ತಿಂಗಳು ಕಳೆದರೂ ಕೆಲಸ ಮಾಡದ ಸಿದ್ದರಾಮಯ್ಯ ಸರ್ಕಾರ ಈಗ ಆಧಾರ್‌ ಜೋಡಣೆ ನೆಪ ಹೇಳಿ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಕಿಡಿ ಕಾರಿದರು.

‘ಗುಪ್ತಚರ ಇಲಾಖೆ ವೈಫಲ್ಯ’ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರು ಕರಸೇವಕರ ಕುರಿತು ನೀಡಿರುವ ಹೇಳಿಕೆಯಂತೆ ತಮ್ಮ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಗೃಹ ಸಚಿವ ಪರಮೇಶ್ವರ ಹೇಳಿರುವುದು ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯ ಎಂದು ಬೊಮ್ಮಾಯಿ ಹೇಳಿದರು. ವಿಧಾನಪರಿಷತ್‌ ಸದಸ್ಯನಿಗಿರುವ ಮಾಹಿತಿ ಗೃಹ ಇಲಾಖೆಗೆ ಇಲ್ಲ. ಹರಿಪ್ರಸಾದ್‌ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ಬೇರೆಯವರು ಈ ರೀತಿ ಹೇಳಿದ್ದರೆ ಇಷ್ಟೊತ್ತಿಗೆ ಬಂಧಿಸುತ್ತಿದ್ದರು ಎಂದು ಹೇಳಿದರು. ಸಿದ್ದರಾಮಯ್ಯ ಅವಧಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು ಅಕ್ರಮ ಸಾರಾಯಿ ದಂಧೆ ಇಸ್ಪೀಟ್‌ ಅಡ್ಡೆಗಳು ಅವ್ಯಾಹತವಾಗಿ ನಡೆಯುತ್ತಿವೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT