ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಇ–ವೇ ಬಿಲ್‌ ಪತ್ತೆ; ₹ 63 ಲಕ್ಷ ದಂಡ ವಸೂಲಿ

ಬೆಳಗಾವಿ ವಾಣಿಜ್ಯ ತೆರಿಗೆ ವಿಭಾಗದ ಕಾರ್ಯಾಚರಣೆ
Last Updated 2 ಜನವರಿ 2019, 20:16 IST
ಅಕ್ಷರ ಗಾತ್ರ

ವಿಜಯಪುರ: ತೆರಿಗೆ ವಂಚಿಸಿ, ನಕಲಿ ದಾಖಲೆಗಳೊಂದಿಗೆ ಉತ್ತರ ಪ್ರದೇಶಕ್ಕೆ ಕೆಂಪಡಿಕೆ ಸಾಗಿಸುತ್ತಿದ್ದ ಸರಕು ಸಾಗಣೆ ಲಾರಿಯನ್ನು ಇಲ್ಲಿನ ವಾಣಿಜ್ಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಾರಿ ಮಾಲೀಕರಿಂದ ದಂಡ ಸಮೇತ ₹63.27 ಲಕ್ಷ ತೆರಿಗೆ ವಸೂಲಿ ಮಾಡಿದ್ದಾರೆ.

ಒಂದೇ ಲಾರಿಯಲ್ಲಿನ, ಒಂದೇ ಸರಕಿಗೆ ಇಷ್ಟೊಂದು ಬೃಹತ್‌ ಮೊತ್ತದ ತೆರಿಗೆ ಮತ್ತು ದಂಡ ವಿಧಿಸಿರುವುದು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ಬಳಿಕ ಇದೇ ಮೊದಲು ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಹೊರ ವಲಯದ ಸೊಲ್ಲಾಪುರ– ವಿಜಯಪುರ ಬೈಪಾಸ್‌ ಮೂಲಕ ರಾಜಸ್ತಾನ ನೋಂದಣಿಯ ಲಾರಿಯೊಂದು, ಉತ್ತರ ಪ್ರದೇಶದ ಮೀರಠ್‌ಗೆ ಸರಕು ಸಾಗಿಸುತ್ತಿದ್ದ ವೇಳೆ ಅಕ್ರಮ ಬೆಳಕಿಗೆ ಬಂದಿದೆ.

ತಮಿಳುನಾಡಿನ ಲೇಬಲ್!: ತಮಿಳುನಾಡಿನ ಹೊಸೂರಿನಲ್ಲಿ ಪಡೆದಿರುವುದಾಗಿ ತಿಳಿಸುವ ಇ–ವೇ ಬಿಲ್‌ ಕೂಡ ನಕಲಿ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಕೆಂಪಡಿಕೆಗೆ ತಮಿಳುನಾಡಿನ ಲೇಬಲ್‌ ಅಂಟಿಸಲಾಗಿದೆ. ಈ ಸರಕು ಮೀರಠ್‌ನ ಸದ್ಗುರು ಟ್ರೇಡರ್ಸ್‌ಗೆ ಸೇರಿದ್ದು ಎಂದು ಗೊತ್ತಾಗಿದೆ. ಆ ಸಂಸ್ಥೆಗೆ ನೋಟಿಸ್‌ ನೀಡಲಾಗಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಕೆ.ರಾಮನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ ಸಂಸ್ಥೆ, ಡಿಸೆಂಬರ್‌ ತಿಂಗಳೊಂದರಲ್ಲೇ ಇಂಥ 40 ಇ–ವೇ ಬಿಲ್‌ ಮೂಲಕ ಸರಕು ಸಾಗಿಸಿದೆ. ಅದರ ಮಾಲೀಕ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಆದಾಯ ತೆರಿಗೆ ಇಲಾಖೆ ಹಾಗೂ ತಮಿಳುನಾಡಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಈ ಸಂಬಂಧ ಮಾಹಿತಿ ನೀಡಲಾಗಿದೆ’ ಎಂದರು.

* ಲಾರಿ ತಪಾಸಣೆ ವೇಳೆ ಅಡಿಕೆ ನೋಡಿದ ಕೂಡಲೇ ಇದು ಶಿವಮೊಗ್ಗ ಭಾಗದ್ದು ಎಂಬ ಅನುಮಾನ ಬಂತು. ತನಿಖೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂತು

- ಬಸವಣ್ಣ, ವಾಣಿಜ್ಯ ತೆರಿಗೆ ಅಧಿಕಾರಿ, ವಿಜಯಪುರ

*ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಕಳ್ಳ ಮಾರ್ಗದಲ್ಲಿ ರಾಜ್ಯದಿಂದ ಅಡಿಕೆ ಸಾಗಿಸುವುದು ದಂಧೆಯಾಗಿದೆ. ಇಂಥ ಆರ್ಥಿಕ ಅಪರಾಧ ಪತ್ತೆ ಹಚ್ಚುವುದು ಇಲಾಖೆಗೆ ಸವಾಲಾಗಿದೆ.

-ಕೆ.ರಾಮನ್‌, ಜಂಟಿ ಆಯುಕ್ತ, ಬೆಳಗಾವಿ ವಾಣಿಜ್ಯ ತೆರಿಗೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT