ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಣ್ಣನ ಅಪಮಾನವೂ ವಿಕೃತಿ: ಕನ್ನಡಿಗರ ಟೀಕಿಸಿದ್ದ ಠಾಕ್ರೆಗೆ ಎಚ್‌ಡಿಕೆ ತಿರುಗೇಟು

Last Updated 19 ಡಿಸೆಂಬರ್ 2021, 8:55 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಮೇಲೆ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ. ನಮ್ಮ ಹೆಮ್ಮೆಯ ಕಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದು ಬಿಟ್ಟು ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರಕಾರ ಪ್ರತಾಪ ತೋರಿಸುವುದು ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಶಿವಾಜಿ ಪ್ರತಿಮೆ ವಿರೂಪ ಮಾಡಿದ ವಿಷಯವನ್ನು ಪ್ರಸ್ತಾಪ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅನಗತ್ಯ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪದವಿಯಲ್ಲಿದ್ದು ಒಕ್ಕೂಟ ವ್ಯವಸ್ಥೆ ಆಶಯವನ್ನು ಗಾಳಿಗೆ ತೂರುವ ಉದ್ಧಟತನದ ಮಾತೇಕೆ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಶಿವಾಜಿ ಮಹಾರಾಜರಿಗೆ ಗೌರವ ಕೊಡೋಣ. ಹಾಗಂತ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಮರಾಠಿಗರಿಗೆ ಅಸಡ್ಡೆ ಯಾಕೆ? ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಗಲಿ ಎಂದು ಹೋರಾಟ ನಡೆಸಿದ ರಾಯಣ್ಣ ಅವರ ಪ್ರತಿಮೆ ಹಾಳು ಮಾಡಿದ ಕೆಟ್ಟ ಮನಸ್ಸುಗಳಿಗೆ ಏನು ಹೇಳುವುದು?‘ ಎಂದು ಎಚ್‌ಡಿಕೆ ಟ್ವೀಟಿಸಿದ್ದಾರೆ.

‘ವಿಕೃತ ಮನಸ್ಸು ಯಾರದ್ದು ಎನ್ನುವುದು ಉದ್ಧವ್ ಠಾಕ್ರೆ ಅವರು ಅರ್ಥ ಮಾಡಿಕೊಂಡರೆ ಉತ್ತಮ. ನಿಮಗೆ ಶಿವಾಜಿ ಹೇಗೆ ಮುಖ್ಯರೋ, ನಮಗೆ ಸಂಗೊಳ್ಳಿ ರಾಯಣ್ಣ ಅವರು ಹಾಗೆಯೇ ಪೂಜ್ಯರು. ಈ ವಿಷಯ ನಿಮಗೆ ಅರ್ಥವಾಗಲಿಲ್ಲ, ಯಾಕೆ?‘ ಎಂದು ಮಾಜಿ ಮುಖ್ಯಮಂತ್ರಿ ಕೇಳಿದ್ದಾರೆ.

‘ಕತ್ತಲಾದ ಮೇಲೆ ಕಳ್ಳರಂತೆ ನುಸುಳಿ ವಾಹನಗಳಿಗೆ ಕಲ್ಲು ಹೊಡೆಯುವುದು ಹೇಡಿತನ. ಮಹಾನ್ ರಾಷ್ಟ್ರಪ್ರೇಮಿ, ಕೆಚ್ಚದೆಯ ವೀರರಾದ ರಾಯಣ್ಣ ಅವರ ಪ್ರತಿಮೆಗೆ ಹಾನಿ ಮಾಡಿದ್ದು ನಿಜವಾದ ವಿಕೃತ. ಮಹಾರಾಷ್ಟ್ರ ಮುಖ್ಯಮಂತ್ರಿಗಳು ಇದನ್ನೆಲ್ಲ ಸಮರ್ಥನೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ‘ ಎಂದೂ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT