ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಬೆಂಗಳೂರು ಸಾಹಿತ್ಯೋತ್ಸವ
Published 2 ಡಿಸೆಂಬರ್ 2023, 23:36 IST
Last Updated 2 ಡಿಸೆಂಬರ್ 2023, 23:36 IST
ಅಕ್ಷರ ಗಾತ್ರ

ಬೆಂಗಳೂರು: ‘ತುರ್ತು ಪರಿಸ್ಥಿತಿ ಯನ್ನು ಹೇರಿದ ಇಂದಿರಾ ಗಾಂಧಿಯ ವ್ಯಕ್ತಿ ಆರಾಧನೆಯ ಕಾರಣದಿಂದ ಉಂಟಾದ ಕರಾಳ ದಿನಗಳಿಂದ ಭಾರತ ಪಾಠ ಕಲಿಯಲಿಲ್ಲ. ಈಗ ನರೇಂದ್ರ ಮೋದಿ ಆಡಳಿತದಲ್ಲಿ ಅದನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ದಿದೆ. ವ್ಯಕ್ತಿಗಳ ಆರಾಧನೆಯಲ್ಲಿ ರಾಜಕೀಯ ಪಕ್ಷಗಳೂ ಮಂಕಾಗಿವೆ’ ಎಂದು ಇತಿಹಾಸತಜ್ಞ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟರು.

ಬೆಂಗಳೂರು ಸಾಹಿತ್ಯೋತ್ಸವದ 12ನೇ ಆವೃತ್ತಿಯ ಮೊದಲ ದಿನವಾದ ಶನಿವಾರ ನಡೆದ ‘ವ್ಯಕ್ತಿ ಆರಾಧನೆ: ಪ್ರಜಾಪ್ರಭುತ್ವದ ಕುಸಿತ’ ಎಂಬ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಹಿಟ್ಲರ್‌ ನಂತರ ಜರ್ಮನಿಯಲ್ಲಿ ಮತ್ತೊಬ್ಬ ಸರ್ವಾಧಿಕಾರಿ ಅಧಿಕಾರಕ್ಕೆ ಬರಲಿಲ್ಲ. ಬ್ರಿಟನ್‌ನಲ್ಲಿ ಬೋರಿಸ್ ಜಾನ್ಸನ್‌ ವ್ಯಕ್ತಿ ಆರಾಧನೆಯ ಜಾಡಿನಲ್ಲಿ ಸಾಗಿದರೂ ಅಲ್ಲಿನ ಆಡಳಿತ ಪಕ್ಷ, ಸುಪ್ರೀಂ ಕೋರ್ಟ್‌ ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಅನುಮತಿ ನೀಡಲಿಲ್ಲ. ಆದರೆ ಭಾರತದಲ್ಲಿನ ಪರಿಸ್ಥಿತಿಯೇ ಭಿನ್ನ. ಇಲ್ಲಿ ಪಕ್ಷ, ಸಂಸತ್‌, ಅಧಿಕಾರಿವರ್ಗ, ನ್ಯಾಯಾಂಗ ಹಾಗೂ ಮಾಧ್ಯಮ ಎಲ್ಲವೂ ವ್ಯಕ್ತಿ ಆರಾಧನೆಯಲ್ಲಿ ಮುಳುಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸದ್ಯ ಆರಾಧನೆಗೆ ಒಳಪಡುತ್ತಿರುವ ಮೋದಿ ಅವರು ಶ್ರಮಜೀವಿ, ಉತ್ತಮ ವಾಗ್ಮಿ, ಚುನಾವಣೆಯನ್ನು ಗೆಲ್ಲಿಸಬಲ್ಲ ಸಾಮರ್ಥ್ಯ ಇರುವವರು, ರಾಜಕೀಯ ಹಾಗೂ ಆಡಳಿತದ ಅನುಭವವುಳ್ಳವರು. ಜತೆಗೆ ಯಾವುದೇ ಅಧಿಕಾರದ ಅನುಭವವನ್ನು ಹೊಂದಿರದ ರಾಹುಲ್ ಗಾಂಧಿಯನ್ನು ತಮ್ಮ ಪ್ರತಿಸ್ಪರ್ಧಿ ಎಂದು ಬಿಂಬಿಸಿದ್ದರ ಫಲವಾಗಿ ಅವರ ಪ್ರಭಾವದ ಪ್ರಖರತೆ ಇನ್ನಷ್ಟು ಹೆಚ್ಚಾಗಿದೆ’ ಎಂದರು.

‘ಮತ್ತೊಂದೆಡೆ ವ್ಯಕ್ತಿ ಆರಾಧನೆಯ ಮನೋಧರ್ಮ ಈಗ ದೆಹಲಿಯಿಂದ ರಾಜ್ಯಗಳಿಗೂ ವಿಸ್ತರಣೆಗೊಂಡಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್, ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ – ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕಳೆದ ಕೆಲವು ಚುನಾವಣೆಗಳನ್ನು ಗಮನಿಸಿದರೆ ವ್ಯಕ್ತಿ ಆರಾಧನೆಯಲ್ಲಿ ಪಕ್ಷಗಳೇ ಮಂಕಾದ ಉದಾಹರಣೆಗಳಿವೆ. ಮೋದಿ ಪ್ರಭಾವದಲ್ಲಿ ಬಿಜೆಪಿ ಮಂಕಾಗಿದೆ. ನಮ್ಮ ರಾಜ್ಯದಲ್ಲೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೆಚ್ಚಾಗಿ ಪ್ರಚಾರಕ್ಕೊಳಗಾದರು. ಇದು ಕಳವಳಕಾರಿ ಬೆಳವಣಿಗೆ’ ಎಂದು ಗುಹಾ ಹೇಳಿದರು.

‘ವ್ಯಕ್ತಿಯ ಆರಾಧನೆಯ ಜತೆಗೆ ಬಂಡವಾಳಶಾಹಿಗಳ ಮೆರವಣಿಗೆಯೂ ಇಲ್ಲಿ ನಡೆಯುತ್ತಿದೆ. ನರೇಂದ್ರ ಮೋದಿ ಕ್ರೀಡಾಂಗಣದ ಎರಡೂ ತುದಿಗಳಿಗೆ ಅಂಬಾನಿ ಹಾಗೂ ಅದಾನಿ ಹೆಸರಗಳನ್ನು ಇಟ್ಟಿರುವುದು ಇದಕ್ಕೆ ಪುಷ್ಟಿ ನೀಡಿವೆ. ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್‌ನ ಅಂತಿಮ ಹಣಾಹಣಿ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಅಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಹೋಗಿದ್ದರು. ಅವರು ಅಲ್ಲಿನ ಆಡಳಿತ ಮಂಡಳಿಯಿಂದ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ನೆನಪಿನ ಕಾಣಿಕೆಯನ್ನು ಪಡೆದರು. ಇದಕ್ಕಿಂತ ದೊಡ್ಡ ವ್ಯಂಗ್ಯ ಇತಿಹಾಸದಲ್ಲಿ ಮತ್ತೊಂದು ಸಿಗಲಾರದು. ಆದರೆ ಯಾವ ಮಾಧ್ಯಮವೂ ಇದನ್ನು ವರದಿ ಮಾಡದಿರುವುದು ಈ ವ್ಯಕ್ತಿ ಆರಾಧನೆಯ ಪ್ರಭಾವಕ್ಕೆ ಹಿಡಿದ ಕನ್ನಡಿ’ ಎಂದು ಕುಟುಕಿದರು.

‘ಪ್ರಜಾಪ್ರಭುತ್ವದಲ್ಲಿ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತವೆ. ಆದರೆ ಆ ಪಕ್ಷದೊಳಗೇ ಆಡಳಿತ ಪ್ರಜಾಪ್ರಭುತ್ವ ಮರೆಯಾಗಿದೆ. ಕುಟುಂಬ ರಾಜಕಾರಣ ಮುನ್ನೆಲೆಗೆ ಬಂದಿದೆ. ಸಂಜಯ್ ಅವರನ್ನು ರಾಜಕೀಯಕ್ಕೆ ತರುವ ಇಂದಿರಾರ ಪ್ರಯತ್ನದಿಂದ ಡಿಎಂಕೆ, ಶಿವಸೇನಾ ಪಕ್ಷಗಳೂ ಉತ್ತೇಜನಗೊಂಡವು. ಇಂಥ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಈ ಎರಡೂ ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಎಂದು ಅಂದಿನ ಕಾಂಗ್ರೆಸ್‌ ಅಧ್ಯಕ್ಷ ಬರುವಾ, ಇಂದಿರಾರನ್ನು ಹೊಗಳಿ ಪದ್ಯವನ್ನೇ ಬರೆದಿದ್ದರು. ಈಗ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಅದೇ ಹೊಗಳಿಕೆಯನ್ನು ಮೋದಿಯ ಬಗ್ಗೆ ಮುಂದುವರಿಸಿದ್ದಾರೆ’ ಎಂದ ಗುಹಾ ಹೇಳಿದರು.

ವಿರೋಧಿಸಿದವರಿಗೆ ವಿರೋಧ; ಬೆಂಬಲ

ಗುಹಾ ಅವರು ಪ್ರಧಾನಿ ಮೋದಿಯನ್ನು ಟೀಕಿಸಿದಷ್ಟು ಇಂದಿರಾ ಗಾಂಧಿ ಅವರನ್ನು ಟೀಕಿಸಲಿಲ್ಲ. ಹೀಗಾಗಿ ಇದನ್ನು ಒಪ್ಪಲಾಗದು ಎಂದು ಸಭಿಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಕಿಕ್ಕಿರಿದು ತುಂಬಿದ್ದ ಸಭಿಕರು ‘ನೋ...’ ಎಂದು ಉದ್ಗರಿಸಿ, ಗುಹಾ ಅವರನ್ನು ಬೆಂಬಲಿಸಿದರು.

‘ಧರ್ಮಾಧಾರಿತ ವಿಭಜನೆ’

‘ದೇಶದಲ್ಲಿ ಬಹುಸಂಖ್ಯಾತರು ಮಾತ್ರ ರಾಷ್ಟ್ರೀಯತೆಗೆ ನಿಷ್ಠರು, ಅಲ್ಪಸಂಖ್ಯಾತರು ಅಲ್ಲ ಎಂಬ ಸುಳ್ಳನ್ನು ಹರಡುತ್ತಲೇ ದೇಶವನ್ನು ವಿಭಜಿಸುವ ಪ್ರಯತ್ನ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಹಲವು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನಡೆಯುತ್ತಿದೆ. ಭಾರತದಲ್ಲಿ ಹಿಂದೂಗಳು ಹೇಗೆ ಬಹುಸಂಖ್ಯಾತರೋ, ಟರ್ಕಿಯಲ್ಲಿ ಟರ್ಕಿಯರು, ರಷ್ಯಾದಲ್ಲಿ ರಷ್ಯನ್ನರು ಮಾತ್ರ ದೇಶ ಭಕ್ತರು ಎಂಬ ಭಾವನೆಯನ್ನು ಬಿತ್ತಲಾಗಿದೆ. ಮತ್ತೊಂದೆಡೆ ಭಾರತದಲ್ಲಿ ಮುಸ್ಲಿಮರು, ಟರ್ಕಿಯಲ್ಲಿ ಕರ್ಟ್ಸ್‌ಗಳು ತೀವ್ರಗಾಮಿಗಳು ಎಂದು ಹಣೆಪಟ್ಟಿ ಕಟ್ಟಲಾಗಿದೆ’ ಎಂದು ರಾಮಚಂದ್ರ ಗುಹಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT