ಬೆಂಗಳೂರು: ಬಿಟ್ ಕಾಯಿನ್ (ಬಿಟಿಸಿ) ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು,ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ.
‘ನನ್ನನ್ನು ಬೆದರಿಸಿದ್ದ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು, ನೂರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ’ ಎಂಬುದಾಗಿ ಶ್ರೀಕಿ ಹೇಳಿಕೆ ನೀಡಿದ್ದಾನೆಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ, ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಹಾಗೂ ಅವರ ಜೊತೆ ಸಂಪರ್ಕದಲ್ಲಿದ್ದ ಕೆಲ ರಾಜಕಾರಣಿಗಳಲ್ಲಿ ನಡುಕ ಶುರುವಾಗಿದೆ.
ಡಾರ್ಕ್‌ವೆಬ್ ಮೂಲಕ ವಿದೇಶದಿಂದ ’ಹೈಡ್ರೊ ಗಾಂಜಾ’ ತರಿಸಿದ್ದ ಆರೋಪದಡಿ ಶ್ರೀಕಿ ಹಾಗೂ ಇತರರ ವಿರುದ್ಧ ಕೆಂಪೇಗೌಡ ನಗರ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಶ್ರೀಕಿ ಹಾಗೂ ಇತರರನ್ನು ಬಂಧಿಸಿದ್ದ ಸಿಸಿಬಿ ಅಧಿಕಾರಿಗಳು, 2 ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್ ಹಾಗೂ ಆ್ಯಪಲ್ ಮ್ಯಾಕ್‌ಬುಕ್ ಜಪ್ತಿ ಮಾಡಿದ್ದರು.
ಪ್ರಕರಣದಲ್ಲಿ ಲಭ್ಯವಾಗಿದ್ದ ಸಾಕ್ಷ್ಯಗಳನ್ನು ತಿರುಚಿದ್ದ ಆರೋಪದಡಿ ಸಿಸಿಬಿ ತನಿಖಾಧಿಕಾರಿಗಳು ಹಾಗೂ ಇತರೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಆಗಸ್ಟ್ 9ರಂದು ಎಫ್‌ಐಆರ್ ದಾಖಲಾಗಿದೆ.
ಇದೇ ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿದ್ದು, ಪ್ರಮುಖ ಆರೋಪಿಗಳು ಹಾಗೂ ಸಿಸಿಬಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದೆ.
ನೋಟಿಸ್ ನೀಡಿ ವಿಚಾರಣೆ: ಕೆಂಪೇಗೌಡ ನಗರ ಹಾಗೂ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಶ್ರೀಕಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅದನ್ನು ಸ್ವೀಕರಿಸಿದ್ದ ಶ್ರೀಕಿ, ಎರಡು ದಿನ ವಿಚಾರಣೆಗೆ ಹಾಜರಾಗಿದ್ದಾನೆ.
‘ಬಿಟ್ ಕಾಯಿನ್ ಹೆಚ್ಚು ಸುದ್ದಿಯಾಗಲು ಶ್ರೀಕಿ ಪ್ರಮುಖ ಕಾರಣ. ಬಿಟ್ ಕಾಯಿನ್ ಏನು? ಹಾಗೂ ಅದರಲ್ಲಿ ಅಕ್ರಮ ಹೇಗಾಯಿತು ? ಎಂಬುದರ ಬಗ್ಗೆ ಶ್ರೀಕಿಯಿಂದ ಮಾಹಿತಿ ಪಡೆಯಬೇಕಿತ್ತು. ಹೀಗಾಗಿ, ಈತನನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸರ್ವರ್‌ಗಳನ್ನು ಶ್ರೀಕಿ ಹ್ಯಾಕ್ ಮಾಡಿದ್ದ. ಅದರಿಂದ ಬಿಟ್ ಕಾಯಿನ್ ಸಂಪಾದಿಸಿ, ಹಲವು ಏಜೆನ್ಸಿಗಳ ಸರ್ವರ್‌ಗಳಲ್ಲಿ ಇರಿಸಿದ್ದ. ಶ್ರೀಕಿಯನ್ನು ಬಂಧಿಸಿದ್ದ ಸಿಸಿಬಿ ಅಧಿಕಾರಿಗಳು, ಬಿಟ್ ಕಾಯಿನ್ ಮೌಲ್ಯದ ಬಗ್ಗೆ ತಿಳಿದುಕೊಂಡಿದ್ದರು. ಬಳಿಕ, ಶ್ರೀಕಿಯನ್ನು ಬೆದರಿಸಿ ಬಿಟ್ ಕಾಯಿನ್‌ಗಳನ್ನು ವರ್ಗಾವಣೆ ಮಾಡಿಕೊಂಡಿರುವ ಅನುಮಾನವಿದೆ. ಇದರ ಬಗ್ಗೆಯೇ ಎಸ್‌ಐಟಿ ಅಧಿಕಾರಿಗಳು, ಶ್ರೀಕಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ತನಿಖಾಧಿಕಾರಿ ವಿಚಾರಣೆ: ಬಿಟ್ ಕಾಯಿನ್ ಅಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ. ಶ್ರೀಕಿವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಹಾಗೂ ತಂಡದವರನ್ನೂ ಸಿಸಿಬಿ ವಿಚಾರಣೆ ನಡೆಸುತ್ತಿರುವುದಾಗಿ ಗೊತ್ತಾಗಿದೆ.
ಎಸ್‌ಐಟಿ ತನಿಖೆಯಲ್ಲಿ ಅನುಮಾನ ?
ಬಿಜೆಪಿ ಅಧಿಕಾರದದಲ್ಲಿದ್ದ ಅವಧಿಯಲ್ಲಿ ಹೆಚ್ಚು ಸುದ್ದಿಯಾಗಿದ್ದ ಬಿಟ್ ಕಾಯಿನ್ ಅಕ್ರಮ ಪ್ರಕರಣ ತನಿಖೆಗೆಂದು ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿದೆ. ಆದರೆ, ಎಸ್‌ಐಟಿ ತನಿಖೆಯ ಮೇಲೆಯೇ ಕೆಲ ಅನುಮಾನಗಳು ಹುಟ್ಟಿಕೊಂಡಿವೆ.
ಶ್ರೀಕಿ ಹಾಗೂ ಇತರರಿಂದ ಜಪ್ತಿ ಮಾಡಿದ್ದ ಸಾಕ್ಷ್ಯಗಳನ್ನು ಸಿಸಿಬಿ ಅಧಿಕಾರಿಗಳು ತಿರುಚಿದ್ದರೆಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಗೊತ್ತಾಗಿದೆ. ಸಾಕ್ಷ್ಯ ತಿರುಚಿದ್ದ ಸಿಸಿಬಿ ಅಧಿಕಾರಿಗಳು, ಇತರೆ ಪೊಲೀಸ್ ಅಧಿಕಾರಿಗಳು ಹಾಗೂ ಇತರರು ಯಾರು ಎಂಬುದು ಎಸ್‌ಐಟಿ ಅಧಿಕಾರಿಗಳಿಗೆ ಗೊತ್ತಿದೆ. ಆದರೆ, ಕಾಟನ್‌ಪೇಟೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಯಾರೊಬ್ಬರ ಹೆಸರು ಸಹ ನಮೂದಿಸಿಲ್ಲ. ಕೇವಲ ‘ತನಿಖಾಧಿಕಾರಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು’ ಎಂದಷ್ಟೇ ಉಲ್ಲೇಖಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
‘ತಪ್ಪಿತಸ್ಥರು ಎಂಬುದು ಗೊತ್ತಾಗುತ್ತಿದ್ದಂತೆ ಎಲ್ಲರ ಹೆಸರು ಉಲ್ಲೇಖಿಸಬೇಕಿತ್ತು. ಏಕೆ ಉಲ್ಲೇಖಿಸಿಲ್ಲ. ಯಾರದ್ದಾದರೂ ಒತ್ತಡ ಇದೆಯಾ’ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಹೊಂದಾಣಿಕೆ ರಾಜಕೀಯದ ಶಂಕೆ
‘ಬಿಟ್ ಕಾಯಿನ್ ಪ್ರಕರಣದಲ್ಲಿ ಹಲವು ಪಕ್ಷಗಳ ಮುಖಂಡರು ಭಾಗಿಯಾಗಿದ್ದಾರೆ. ರಾಜಕೀಯ ಹೊಂದಾಣಿಕೆ ಮಾಡಿಕೊಂಡು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆದಿರಬಹುದು’ ಎಂದು ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ.
ಎಲ್ಲಿದ್ದ ಶ್ರೀಕಿ ?
‘ಬೆಂಗಳೂರು ಜಯನಗರ ನಿವಾಸಿ ಶ್ರೀಕಿ, ನೆದರ್ಲೆಂಡ್ಸ್‌ನಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡಿದ್ದಾನೆ. ಬಿ.ಎಸ್ಸಿ ಕಲಿಯುವ ಸಂದರ್ಭದಲ್ಲಿ ಹ್ಯಾಕರ್‌ಗಳ ಪರಿಚಯವಾಗಿತ್ತು. ನಂತರ, ಹ್ಯಾಕರ್ ಆಗಿ ಪರಿಣಿತಿ ಪಡೆದುಕೊಂಡಿದ್ದ. ರಾಜ್ಯ ಸರ್ಕಾರದ ಇ–ಸಂಗ್ರಹಣಾ ಜಾಲತಾಣ ಹ್ಯಾಕ್ ಮಾಡಿದ್ದ ಪ್ರಕರಣದಲ್ಲೂ ಈತನ ಪಾತ್ರವಿತ್ತು’ ಎಂದು ಮೂಲಗಳು ಹೇಳಿವೆ.
‘ಜಾಮೀನು ಬಳಿಕ ತಲೆಮರೆಸಿಕೊಂಡಿದ್ದ ಈತ, ಕೆಲ ದಿನ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ. ಡ್ರಗ್ಸ್ ವ್ಯಸನಿಯಾಗಿದ್ದರಿಂದ ಚಿಕಿತ್ಸೆ ಕೊಡಿಸುತ್ತಿರುವುದಾಗಿ ಪೋಷಕರು ಹೇಳಿದ್ದರು. ಇದಾದ ನಂತರ, ಈತನ ಸುಳಿವು ಇರಲಿಲ್ಲ. ಎಲ್ಲಿದ್ದಾನೆಂಬುದು ಯಾರಿಗೂ ಗೊತ್ತಿರಲಿಲ್ಲ. ಎಸ್‌ಐಟಿ ಅಧಿಕಾರಿಗಳು ಈತನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಈತನ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.