ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಟ್‌ ಕಾಯಿನ್ ಹಗರಣ: ಆರೋಪಿಗಳ ವಿರುದ್ಧದ ಕೋಕಾ ಕಾಯ್ದೆ ರದ್ದು

Published 3 ಜುಲೈ 2024, 15:55 IST
Last Updated 3 ಜುಲೈ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ಬಹುಕೋಟಿ ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿ ಶ್ರೀಕಿ ಮತ್ತು ರಾಬಿನ್‌ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ–2000) ಅಡಿಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಕೋಕಾ ಅನ್ವಯಗೊಳಿಸಿದ್ದನ್ನು ಪ್ರಶ್ನಿಸಿ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಹಾಗೂ ಪಶ್ಚಿಮ ಬಂಗಾಳದ ರಾಬಿನ್‌ ಖಂಡೇಲ್‌ವಾಲಾ ಸಲ್ಲಿಸಿದ್ದ ಪ್ರತ್ಯೇಕ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಕೋಕಾ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಿತು.

ಅರ್ಜಿದಾರರ ಪರ ಹಿರಿಯ ವಕೀಲರಾದ ಸಂದೇಶ್‌ ಜೆ.ಚೌಟ ಹಾಗೂ ಎಂ.ಅರುಣ್‌ ಶ್ಯಾಮ್‌, ‘ಆರೋಪಿಗಳಿಗೆ ಜಾಮೀನು ದೊರೆಯಬಾರದು ಎಂಬ ದುರುದ್ದೇಶದಿಂದ ಕೋಕಾ ಕಾಯ್ದೆಯನ್ನು ಕಾನೂನುಬಾಹಿರವಾಗಿ ಅನ್ವಯಿಸಲಾಗಿದೆ. ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಈ ಪ್ರಕರಣದಲ್ಲಿ ಗಂಭೀರ  ಅಪರಾಧ ದಾಖಲಿಸುವ ಮುನ್ನ ಪಾಲಿಸಬೇಕಾದ ಕಾನೂನು ಪಾಲನೆ ಆಗಿಲ್ಲ. ಆದ್ದರಿಂದ ಕೋಕಾ ಕಾಯ್ದೆ ರದ್ದುಪಡಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಇಬ್ಬರೂ ಆರೋಪಿಗಳ ವಿರುದ್ಧದ ಕೋಕಾ ಕಾಯ್ದೆ ರದ್ದುಗೊಳಿಸಿ ಆದೇಶಿಸಿತು. ಅರ್ಜಿದಾರರ ಪರ ವಕೀಲ ಎಸ್‌.ಸುನಿಲ್‌ ಕುಮಾರ್ ವಕಾಲತ್ತು ವಹಿಸಿದ್ದರು.

ಪ್ರಕರಣವೇನು?:

ಬಿಟ್‌ ಕಾಯಿನ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಪೊಲೀಸರು ನ್ಯಾಯಾಲಯಕ್ಕೆ; ‘ಅಪರಾಧ ನಡೆದಿರುವುದು ನಿಜ. ಆದರೆ ಯಾರು ಅಪರಾಧಿಗಳು ಎಂಬುದು ಪತ್ತೆಯಾಗಿಲ್ಲ’ ಎಂದು ‘ಸಿ’ ಅಂತಿಮ ವರದಿ ಸಲ್ಲಿಸಿದ್ದರು. ನಂತರ ಇದನ್ನು ಸೈಬರ್‌ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. 2023ರಲ್ಲಿ ಜುಲೈನಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತದನಂತರ ಶ್ರೀಕಿಯನ್ನು ಬಂಧಿಸಿದ್ದ ಪೊಲೀಸರು ಶ್ರೀಕಿಯ ಸ್ವ ಇಚ್ಛಾ ಹೇಳಿಕೆ ಅನುಸಾರ ಕೋಕಾ ಕಾಯ್ದೆ ಅನ್ವಯಗೊಳಿಸಿ ರಾಬಿನ್‌ ಅನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT