ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಸರ್ಕಾರ ಸಂಚು: ತೇಜಸ್ವಿ ಸೂರ್ಯ ಆರೋಪ

Published 11 ಜೂನ್ 2023, 2:29 IST
Last Updated 11 ಜೂನ್ 2023, 2:29 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ, ಆರೆಸ್ಸೆಸ್‌ ಮತ್ತು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ, ಬಂಧಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಸಂಚು ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ ಕಾನೂನು ನೆರವು ನೀಡಲು ಬಿಜೆಪಿಯ ಕಾನೂನು ಪ್ರಕೋಷ್ಠವು ಆರಂಭಿಸಿರುವ ಕಾನೂನು ಸಹಾಯವಾಣಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

'ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು. ನಮ್ಮ ಕಾರ್ಯಕರ್ತರು ಖಾಸಗಿ ಉದ್ಯೋಗಗಳನ್ನು ಕಳೆದುಕೊಳ್ಳುವಂತೆ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಮುಖ್ಯಮಂತ್ರಿಯನ್ನು ಟೀಕಿಸಿದ ಕಾರಣಕ್ಕೆ ಪೊಲೀಸ್ ಠಾಣೆಗಳಿಗೆ ಕರೆದೊಯ್ದು ಹಿಂಸಿಸಲಾಗಿತ್ತು. ಈ ಬಾರಿಯೂ ಅಂತಹ ಪ್ರಯತ್ನ ಮಾಡಲು ಕಾಂಗ್ರೆಸ್ ಸರ್ಕಾರದಲ್ಲಿ ಇರುವವರು ಸಿದ್ಧತೆ ಮಾಡುತ್ತಿದ್ದಾರೆ' ಎಂದು ದೂರಿದರು.

'ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ, ನಮ್ಮ ಕಾರ್ಯಕರ್ತರನ್ನು ಬಂಧಿಸಲು ವೇದಿಕೆ ಸಿದ್ಧವಾಗುತ್ತಿದೆ. ಅದಕ್ಕೆ ಪೂರಕವಾಗಿ ಕೆಲವು ಸಚಿವರು ಮಾತನಾಡುತ್ತಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರದ ಪರವಾಗಿ ಕೆಲಸ ಮಾಡುವವರನ್ನು ರೌಡಿ ಪಟ್ಟಿಗೆ ಸೇರಿಸಿ ತೊಂದರೆ ಕೊಡಲು ತಯಾರಿ ನಡೆದಿದೆ' ಎಂದರು.

ಕಾನೂನು ಪ್ರಕೋಷ್ಠದ ಸಂಚಾಲಕ  ಯೋಗೇಂದ್ರ ಹೂಡಾಘಟ್ಟ ಮಾತನಾಡಿ, 'ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಮ್ಮ ಕಾರ್ಯಕರ್ರನ್ನು ಕಟ್ಟಿಹಾಕಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅದನ್ನು ಎದುರಿಸುವುದಕ್ಕಾಗಿ ಸಹಾಯವಾಣಿ ಆರಂಭಿಸಿದ್ದೇವೆ. ತೇಜಸ್ವಿ ಸೂರ್ಯ ಮಾರ್ಗದರ್ಶನದಲ್ಲಿ ಇದು ಕಾರ್ಯನಿರ್ವಹಿಸಲಿದೆ' ಎಂದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ವಸಂತಕುಮಾರ್, ಸಹಾಯವಾಣಿ ಸಂಯೋಜಕ ಸಂದೀಪ್ ರವಿ ಉಪಸ್ಥಿತರಿದ್ದರು.

ಸಹಾಯವಾಣಿ ಸಂಖ್ಯೆ: 18003091907

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT