ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳ ರಾಜಕೀಯದಿಂದ ತಪ್ಪಿದ ಸಚಿವ ಸ್ಥಾನ: ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ

Published 21 ಜೂನ್ 2024, 10:58 IST
Last Updated 21 ಜೂನ್ 2024, 10:58 IST
ಅಕ್ಷರ ಗಾತ್ರ

ವಿಜಯಪುರ: ‘ಸತತ ಏಳು ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆಯಾಗಿರುವ ನನಗೆ ಕೇಂದ್ರ ಸಚಿವನಾಗುವ ಎಲ್ಲ ಅರ್ಹತೆ ಮತ್ತು ಹಿರಿತನ ಇತ್ತು. ಆದರೆ, ರಾಜ್ಯ ಬಿಜೆಪಿ ನಾಯಕರ ಒಳ ರಾಜಕೀಯದಿಂದಾಗಿ ಅವಕಾಶ ತಪ್ಪಿತು’ ಎಂದು ವಿಜಯಪುರ ಎಸ್‌.ಸಿ ಮೀಸಲು ಲೋಕಸಭಾ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ ಅವರು ಪಕ್ಷದ ನಾಯಕರು ವಿರುದ್ಧ ಬೇಸರ ವ್ಯಕ್ತಪಡಿಸಿದರು.

‘ನಾನು ಸಚಿವನಾಗಬೇಕು ಎಂಬುದು ಸಮಾಜದ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಆಶಯವಾಗಿತ್ತು. ರಾಜ್ಯದ ಬಿಜೆಪಿ ನಾಯಕರು ನನ್ನ ಹೆಸರು ಸೂಚಿಸುತ್ತಾರೆ ಎಂಬ ವಿಶ್ವಾಸ ಇತ್ತು. ಅವರ ಜವಾಬ್ದಾರಿಯೂ ಇತ್ತು. ಆದರೆ, ಯಾರೊಬ್ಬರೂ ನನ್ನ ಪರವಾಗಿ ಬಾಯಿ ಬಿಡಲಿಲ್ಲ. ಈ ವಿಷಯದಲ್ಲಿ ತಪ್ಪು ಮಾಡಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ನನ್ನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರುವ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರದ ಯಾರನ್ನೂ ಹೊಣೆ ಮಾಡಲು ಬಯಸುವುದಿಲ್ಲ. ಈ ವಿಷಯದಲ್ಲಿ ನನ್ನ ಹೆಸರನ್ನು ಶಿಫಾರಸು ಮಾಡದೇ ರಾಜ್ಯ ಬಿಜೆಪಿ ನಾಯಕರು ತಪ್ಪು ಮಾಡಿದ್ದಾರೆ. ಇದು ಬಹಳ ಅಸಹ್ಯ ಎನಿಸುತ್ತದೆ. ಮಂತ್ರಿ ಮಾಡಿದರೆ ಚಾರಾಣೆ, ಮಾಡದಿದ್ದರೆ ಬಾರಾಣೆ’ ಎಂದು ಗುಡುಗಿದರು.  

‘ಹಿರಿಯ ದಲಿತ ನಾಯಕನಾದ ನನ್ನನ್ನು ಬಿಜೆಪಿಯಲ್ಲಿ ಬೆಳೆಯದಂತೆ ತುಳಿಯುವ ಕೆಲಸ ಪಕ್ಷದೊಳಗೆ ನಡೆದಿದೆ. ಇದಕ್ಕೆ ಪಕ್ಷದ ರಾಷ್ಟ್ರ ನಾಯಕರು ಕಾರಣವಲ್ಲ, ರಾಜ್ಯದ ನಾಯಕರು ಕಾರಣ’ ಎಂದರು.

‘ರಾಜ್ಯದಲ್ಲಿ ಲಿಂಗಾಯತ ಸಮುದಾಯ ಹೆಚ್ಚಿರುವುದು ಉತ್ತರ ಕರ್ನಾಟಕದಲ್ಲಿ ಆದರೆ, ಲಿಂಗಾಯತ ಸಮುದಾಯ ಕಡಿಮೆ ಇರುವ ದಕ್ಷಿಣ ಕರ್ನಾಟಕ ಭಾಗದವರನ್ನು ಸಚಿವರನ್ನಾಗಿ ಮಾಡಿದ್ದಾರೆ.  ಪಕ್ಷದೊಳಗಿನ ಒಳ ರಾಜಕೀಯದಿಂದ ಇಂತಹ ಅನಾಹುತ ಆಗಿದೆ. ಪಕ್ಷದ ಹಿರಿಯರು ಈ ಬಗ್ಗೆ ಗಮನಿಸಬೇಕು’ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಸನ್ಮಾನ ಬೇಡ...

‘ಜೂನ್‌ 22ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿರುವ ರಾಜ್ಯದ ಸಂಸದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಆದರೆ, ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಇಚ್ಛೆ ಇಲ್ಲ. ವಿಜಯಪುರದಲ್ಲೇ ನೂರಾರು ಜನರು ಬಂದು ನಿತ್ಯ ಸನ್ಮಾನ ಮಾಡುತ್ತಿದ್ದಾರೆ. ಅವರ ಸನ್ಮಾನದ ಎದುರು ಪಕ್ಷದ ಸನ್ಮಾನ ನನಗೆ ಬೇಡ’ ಎಂದು ಅಸಮಾದಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT