ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗರಿಗೆ ಜನರ ಭಾವನೆ ಜೊತೆ ಆಟ, ನಮಗೆ ಜನರ ಬದುಕಿನ ಕಡೆಗೆ ಗಮನ: ಡಿಕೆಶಿ

ದೆಹಲಿಯಲ್ಲಿ ಗುಡುಗಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌
Published 7 ಫೆಬ್ರುವರಿ 2024, 6:36 IST
Last Updated 7 ಫೆಬ್ರುವರಿ 2024, 6:36 IST
ಅಕ್ಷರ ಗಾತ್ರ

ನವದೆಹಲಿ: ನಮ್ಮ ಕೂಗು ಕೇಂದ್ರ ಸರ್ಕಾರದ ಕಿವಿಗೆ ಬೀಳಲಿ ಎಂದು ದೆಹಲಿಗೆ ಬಂದು ನಾವು ಧ್ವನಿ ಎತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ಖಂಡಿಸಿ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

ಈ ಹೋರಾಟದಿಂದ ಸಮಸ್ಯೆ ಬಗೆಹರಿಯುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲವಾಗಿದೆ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಹೇಳಿದ್ದರೂ ಇವರು ಕಿವಿಗೆ ಹಾಕಿಕೊಂಡಿಲ್ಲ. ಹೀಗಾಗಿ ನಾವು ಇಲ್ಲಿಗೆ ಬಂದು ಹೋರಾಟ ಮಾಡುತ್ತಿದ್ದೇವೆ’ ಎಂದರು.

ರಾಜ್ಯ ಸರ್ಕಾರದ ಹೋರಾಟ ರಾಜಕೀಯ ಸ್ಟಂಟ್ ಎಂಬ ಬಿಜೆಪಿ ಆರೋಪದ ಬಗ್ಗೆ ಉತ್ತರಿಸಿದ ಅವರು, ‘ಬಿಜೆಪಿಯವರು ನಮ್ಮ ಹೋರಾಟದ ಬಗ್ಗೆ ಏನಾದರೂ ಹೇಳಲಿ. ನಮ್ಮಲ್ಲಿ ಯಾರೂ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಇಲ್ಲ. ಅವರ ಪಕ್ಷದಲ್ಲೇ ನಿರ್ದೇಶಕರು, ನಿರ್ಮಾಪಕರು ಇದ್ದಾರೆ. ನಾವು ನೋಡುತ್ತಿದ್ದೇವೆ. ಅವರು ಭಾವನೆ ಮೇಲೆ ದೇಶ ತೆಗೆದುಕೊಂಡು ಹೋದರೆ, ನಾವು ಜನರ ಬದುಕಿನ ಬಗ್ಗೆ ಗಮನ ಹರಿಸುತ್ತಿದ್ದೇವೆ. ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದವರು ಬೇರೆ ರಾಜ್ಯಗಳಲ್ಲಿ ಅವರೇ ಗ್ಯಾರಂಟಿ ಘೋಷಣೆ ಮಾಡಿದ್ದು ಯಾಕೆ?’ ಎಂದು ಕೇಳಿದರು.

ಗ್ಯಾರಂಟಿ ಯೋಜನೆಯಿಂದ ಹಣ ಖಾಲಿ ಮಾಡಿಕೊಂಡು ದೆಹಲಿಗೆ ಬಂದಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ನಮ್ಮ ಹಣ ಖಾಲಿಯಾಗಿಲ್ಲ. ಸರ್ಕಾರ ನಡೆಸುವ ಸಾಮರ್ಥ್ಯ ನಮಗಿದೆ. ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಪಾಲಿನ ಹಣ ನೀಡಲಿ ಸಾಕು’ ಎಂದು ತಿಳಿಸಿದರು.

‘ಬೇರೆ ರಾಜ್ಯಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ’

ಕೇರಳದ ಪ್ರತಿಭಟನೆ ಬಗ್ಗೆ ಕೇಳಿದಾಗ, ‘ನಾನು ಬೇರೆ ರಾಜ್ಯಗಳ ವಿಚಾರವಾಗಿ ಮಾತನಾಡುವುದಿಲ್ಲ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಮ್ಮ ಪಾಲಿನ ಹಣ ನಾವು ಕೇಳುತ್ತಿದ್ದೇವೆ. ಬೇರೆ ರಾಜ್ಯಗಳು ಲಾಭ ಪಡೆಯಲಿ. ನಮಗೆ ಅದರ ಬಗ್ಗೆ ಆಕ್ಷೇಪವಿಲ್ಲ. ಕೇಂದ್ರ ಸರ್ಕಾರ ಗುಜರಾತಿಗೆ ಗಿಫ್ಟ್ ಸಿಟಿ ಯೋಜನೆ ನೀಡಿದೆ. ನಮ್ಮ ರಾಜ್ಯಕ್ಕೂ ಒಂದು ಗಿಫ್ಟ್ ಸಿಟಿ ನೀಡಲಿ. ಎಲ್ಲಾ ರಾಜ್ಯಗಳಿಗೂ ಇಂತಹ ಯೋಜನೆ ನೀಡಲಿ. ಭಾರತ ಒಕ್ಕೂಟ ರಾಷ್ಟ್ರ. ನಮಗೂ ಯೋಜನೆ ನೀಡಿ ಎಂದು ನಾವು ಆಗ್ರಹಿಸುತ್ತಿದ್ದೇವೆ. ನಮಗೆ ಅವಕಾಶ ನೀಡಿದರೆ ನಾವು ಅವರಿಗಿಂತ ಹೆಚ್ಚು ಉತ್ತಮವಾಗಿ ಕೆಲಸ ಮಾಡಿ ತೋರಿಸುತ್ತೇವೆ. ನಮ್ಮ ರಾಜ್ಯದ ತೆರಿಗೆ, ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಪಾಲಿನ ಅನುದಾನ ನೀಡಲಿ’ ಎಂದು ತಿಳಿಸಿದರು.

ಕೇರಳ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಕೇರಳ ಸರ್ಕಾರ ನಮ್ಮ ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಪತ್ರ ಬರೆದಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಅವರು ನಮ್ಮ ನೆರೆ ರಾಜ್ಯ. ಅವರನ್ನು ನಾವು ಗೌರವಿಸುತ್ತೇವೆ. ಅವರು ದೇಶದ ಆರ್ಥಿಕತೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಒಂದೇ, ಯಾರಿಗೆಲ್ಲಾ ಅನ್ಯಾಯವಾಗಿದೆ ಅವರು ಧ್ವನಿ ಎತ್ತಲಿ’ ಎಂದು ತಿಳಿಸಿದರು.

ಬಿಜೆಪಿಯೇತರ ರಾಜ್ಯಗಳಿಗೆ ಅನ್ಯಾಯ ಮಾಡಲಾಗುತ್ತಿದೆಯೇ? ಎಂದು ಕೇಳಿದಾಗ, ‘ಬಿಜೆಪಿ ಆಡಳಿತ ಇರುವ ರಾಜ್ಯಗಳು, ಬಿಜೆಪಿಯೇತರ ರಾಜ್ಯಗಳು ಎಂದು ವರ್ಗೀಕರಣ ಮಾಡಿ ನಾವು ರಾಜಕೀಯ ಮಾಡುವುದಿಲ್ಲ. ರಾಜಕೀಯ ಶಾಶ್ವತವಲ್ಲ. 2 ಸಂಸದರಿಂದ ಅವರು 300 ಸಂಸದರಾಗಿದ್ದಾರೆ, 400 ಸಂಸದರಿಂದ ನಾವು 51 ಸಂಸದರಿಗೆ ಇಳಿದಿದ್ದೇವೆ. ನಾಳೆ ನಾವು 300ಕ್ಕೂ ಹೆಚ್ಚು ಸಂಸದರಾಗುತ್ತೇವೆ. ಇದು ರಾಜಕೀಯದ ಭಾಗ’ ಎಂದು ತಿಳಿಸಿದರು.

‘ಪ್ರಧಾನಿ ಬಳಿ ಸಮಯ ಕೇಳಿದ್ದೇವೆ’

ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರಿಗೆ ಮನವಿ ಮಾಡುತ್ತೀರಾ? ಎಂದು ಕೇಳಿದಾಗ, ‘ಖಂಡಿತವಾಗಿಯೂ ಮಾಡುತ್ತೇವೆ. ನಮ್ಮ ಇಲಾಖೆ ವಿಚಾರವಾಗಿ ಮಾತನಾಡಲು ನಾನು ಪ್ರಧಾನಮಂತ್ರಿಗಳ ಬಳಿ ಸಮಯ ಕೇಳಿದ್ದೇವೆ. ಸಮಯ ನೀಡಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT